ಮಂಗಳೂರು : ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲು ಖಾಲಿ ಇರುವ ಗ್ರಾಮ ಪಂಚಾಯತ್‍ಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಜಿಲ್ಲೆಯಲ್ಲಿ ಒಟ್ಟು 223 ಗ್ರಾಮ ಪಂಚಾಯತಿಗಳಿಗೆ 304 ಗ್ರಾಮ ಒನ್ ಕೇಂದ್ರಗಳನ್ನು ತೆರೆಯಬೇಕಾಗಿದ್ದು, ಈ ಪೈಕಿ 230 ಕೇಂದ್ರಗಳನ್ನು ತೆರೆಯಲಾಗಿದೆ. ಬಾಕಿ ಇರುವ 74 ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲು ಅರ್ಜಿ ಆಹ್ವಾನಿಸಿದೆ. ಆಧಾರ್ ಸರ್ಟಿಫಿಕೇಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ, ಅದೇ ಗ್ರಾಮ ಪಂಚಾಯತ್ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಅಂತೆಯೇ ಮಹಿಳೆಯರಿಗೆ, ವಿಕಲಚೇತನರಿಗೆ ಹಾಗೂ ತೃತೀಯ ಲಿಂಗಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಫ್ರಾಂಚೈಸಿ ಅರ್ಜಿದಾರರು ಡಿಪ್ಲೋಮಾ, ಐ.ಟಿ.ಐ. ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಅಥವಾ ತಾಂತ್ರಿಕ ವಿಭಾಗದಲ್ಲಿ ಪರಿಣತಿ ಹೊಂದಿರಬೇಕು ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಅಷ್ಟೇ ಅಲ್ಲದೆ, ಅರ್ಜಿದಾರರು ಸ್ವಂತ ಅಥವಾ ಬಾಡಿಗೆ ಕಟ್ಟಡ ಹೊಂದಿರಬೇಕು ಅಥವಾ ಟೈಲ್ಸ್ ಗ್ರಾನೈಟ್ ಫ್ಲೋರಿಂಗ್, ಆರ್.ಸಿ.ಸಿ ಛಾವಣಿ ಇತ್ಯಾದಿ ಯಾವುದೇ ನೀರು ಸೋರಿಕೆಯಾಗದ ಕಟ್ಟಡಗಳಲ್ಲಿ ಗ್ರಾಮಒನ್ ಕೇಂದ್ರಗಳನ್ನು ಸ್ಥಾಪಿಸಲು ತಯಾರಾಗಿರಬೇಕು ಎಂದು ಅಪರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನ- ಡಿಸೆಂಬರ್ 24
ಅಧಿಕೃತ ವೆಬ್‍ಸೈಟ್: https://gramaonebis.com/applicantregistration
ಸಹಾಯವಾಣಿ ಸಂಖ್ಯೆ:080-69008800
