KPSC, KEA Job Notifications in 2024: ಉದ್ಯೋಗ ಆಕಾಂಕ್ಷಿಗಳೇ ಗಮನಿಸಿ, ಕರ್ನಾಟಕ ಸರ್ಕಾರ (Karnataka Govt)ಮುಂದಿನ ವರ್ಷದಲ್ಲಿ ಹಲವು ಇಲಾಖೆಗಳ ಹುದ್ದೆಗಳನ್ನು(KPSC, KEA Job Notifications in 2024) ಭರ್ತಿ ಮಾಡುವ ಕುರಿತಂತೆ ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಮಾಹಿತಿ ನೀಡಿದೆ.
2024 ರಲ್ಲಿ ಕರ್ನಾಟಕ ಸರ್ಕಾರದ ಯಾವ ಇಲಾಖೆ, ಹುದ್ದೆಗಳಿಗೆ ನೇಮಕ ನಡೆಯಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ!!
# ಸಾರಿಗೆ ಇಲಾಖೆಯ ಹುದ್ದೆಗಳು
2024ರಲ್ಲಿ 9000 ಸಾರಿಗೆ ಸಿಬ್ಬಂದಿ (ಕಂಡಕ್ಟರ್ ಹಾಗೂ ಕಂಡಕ್ಟರ್ ಕಮ್ ಚಾಲಕ ) ಹುದ್ದೆಗಳ ಭರ್ತಿಗೆ ತೀರ್ಮಾನ ಕೈಗೊಳ್ಳಲಾಗಿದೆ. ಈ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.
# ಕಂದಾಯ ಇಲಾಖೆಯ ಹುದ್ದೆಗಳು
ಸರ್ಕಾರಿ ಕಚೇರಿಗಳಲ್ಲಿ ಕೆಲಸಗಳು ಸಲೀಸಾಗಿ ನಡೆಯಬೇಕು ಎಂಬ ಉದ್ದೇಶದಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿರುವ 256 ಉಪನೋಂದಣಿ ಕಚೇರಿಗಳಲ್ಲಿ ಒಟ್ಟು 1145 ಹುದ್ದೆಗಳು ಮಂಜೂರಾಗಿವೆ. ಇವುಗಳಲ್ಲಿ 55 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಆರ್ಥಿಕ ಇಲಾಖೆ ಜತೆ ಚರ್ಚಿಸಿ ಹೆಚ್ಚುವರಿ ಹುದ್ದೆಗಳ ಭರ್ತಿಗೆ ಅನುಮತಿ ಪಡೆಯಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡರು ತಿಳಿಸಿದ್ದಾರೆ.
# ಗ್ರಾಮ ಲೆಕ್ಕಿಗರು / ಗ್ರಾಮ ಆಡಳಿತಾಧಿಕಾರಿಗಳ ನೇಮಕ
ರಾಜ್ಯದಲ್ಲಿ ಒಟ್ಟು 1500 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳು ಖಾಲಿಯಿದ್ದು, ಇವುಗಳಲ್ಲಿ ಮೊದಲ ಹಂತದಲ್ಲಿ 750 ಹುದ್ದೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲು ಕಂದಾಯ ಇಲಾಖೆ ಮುಂದಾಗಿದೆ.
# ಅರಣ್ಯ ಇಲಾಖೆ ಹುದ್ದೆಗಳಿಗೆ ನೇಮಕಾತಿ
ಉಳಿಕೆ ಮೂಲ ವೃಂದದ 26 ವಲಯ ಅರಣ್ಯಾಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆ ಮುಖಾಂತರ ಹುದ್ದೆಯ ಭರ್ತಿ ಮಾಡಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. 143 ಉಪ ವಲಯ ಅರಣ್ಯಾಧಿಕಾರಿ ಕಂ ಮೋಜಣಿದಾರರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅನುಮತಿಯನ್ನು ಸರ್ಕಾರ ನೀಡಿದೆ.
# ಕೆಎಎಸ್ ಹುದ್ದೆಗಳ ನೇಮಕಾತಿ ವಿವರ
ರಾಜ್ಯದಲ್ಲಿ ಖಾಲಿ ಇರುವ ಕೆಎಎಸ್ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಲ್ಲಿ ವಿವಿಧ ಹಲವು ಇಲಾಖೆಗಳಿಗೆ ಸೇರಿ 656 ಹುದ್ದೆಗಳ ಭರ್ತಿಗೆ ಮಾನ್ಯ ಮುಖ್ಯಮಂತ್ರಿಗಳು ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸಿ ಮನವಿ ಮಾಡಿದ್ದರು. ಆದರೆ ಆರ್ಥಿಕ ಇಲಾಖೆ ಒಟ್ಟು 504 ಹುದ್ದೆಗಳ ಭರ್ತಿಗೆ ಮಾತ್ರ ಅವಕಾಶ ಕಲ್ಪಿಸಿದೆ.
# ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ಇತರೆ ಹುದ್ದೆಗಳಿಗೆ ಅಧಿಸೂಚನೆ
ಪಂಚಾಯತ್ ರಾಜ್ ಇಲಾಖೆಯಡಿಯಲ್ಲಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)-150, ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1- 135, ಪಂಚಾಯ್ತಿ ಕಾರ್ಯದರ್ಶಿ ಗ್ರೇಡ್ 2- 343, ದ್ವಿತೀಯ ದರ್ಜೆ ಲೆಕ್ಕ ಸಹಾಯಕ -105 ಹುದ್ದೆಗಳಿಗೆ ನೇಮಕಾತಿ ವಿಧಾನ ನಿಗದಿ ಮಾಡಲಾಗಿದ್ದು, 29-03-2023 ರಂದು ಅಧಿಕೃತ ಆದೇಶ ಹೊರಡಿಸಿದೆ.
# ಸಮಾಜ ಕಲ್ಯಾಣ ಇಲಾಖೆ ವಾರ್ಡನ್ ಹುದ್ದೆಗಳು
ನೇರ ನೇಮಕಾತಿ ಕೋಟಾದಡಿ ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿಯಿರುವ 232 ವಾರ್ಡನ್ ಗಳ ಭರ್ತಿ ಕುರಿತು ಆರ್ಥಿಕ ಇಲಾಖೆಯ ಸಹಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ.
# ಪೊಲೀಸ್ ಇಲಾಖೆಯ ಹುದ್ದೆಗಳು
ರಾಜ್ಯ ಪೊಲೀಸ್ ಇಲಾಖೆಯಲ್ಲಿ 20,000 ಹುದ್ದೆ ಖಾಲಿಯಿದ್ದು, ಈ ಹುದ್ದೆಗಳ ನೇಮಕಾತಿಗೆ ಸಿದ್ಧತೆ ನಡೆದಿದೆ ಎನ್ನಲಾಗಿದೆ.
# ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹುದ್ದೆಗಳು
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಒಟ್ಟು 2439 ನಿಲಯ ಪಾಲಕರು / ನಿಲಯ ಮೇಲ್ವಿಚಾರಕರ ಹುದ್ದೆಗಳು ಮಂಜೂರಾಗಿವೆ. ಈ ಪೈಕಿ ಪ್ರಸ್ತುತ 1189 ಹುದ್ದೆಗಳು ಭರ್ತಿಯಾಗಿದೆ. ಇನ್ನು 1250 ಹುದ್ದೆಗಳು ಖಾಲಿಯಿದ್ದು, ಸದರಿ ಹುದ್ದೆಗಳ ಭರ್ತಿಯ ಕ್ರಮವಾಗಿ ಪ್ರಸ್ತುತ 188 ಹುದ್ದೆಗಳ ಭರ್ತಿಗೆ ಹೆಚ್ಚುವರಿ ಪಟ್ಟಿ ಕಳುಹಿಸಲು ಕೆಪಿಎಸ್‌ಸಿಗೆ ಮಾನ್ಯ ಸಚಿವರು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಲ್ಲಿ 41 ಅಭ್ಯರ್ಥಿಗಳ ಪಟ್ಟಿ ಸ್ವೀಕರಿಸಲಾಗಿದ್ದು, ಉಳಿದ 1006 ಹುದ್ದೆಗಳಿಗೆ ನೇರ ನೇಮಕಾತಿ ಕೋಟಾದಡಿ ಭರ್ತಿ ಮಾಡುವ ಕಾರ್ಯಕ್ಕಾಗಿ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ.
