Home » Mangalore: ಜ.30ರಿಂದ ಅಗ್ನಿವೀರ್ ನೇಮಕಾತಿ ಶಿಬಿರ

Mangalore: ಜ.30ರಿಂದ ಅಗ್ನಿವೀರ್ ನೇಮಕಾತಿ ಶಿಬಿರ

0 comments

Mangalore: ಮಂಗಳೂರಿನ ಸೇನಾ ನೇಮಕಾತಿ ಕಚೇರಿ ವತಿಯಿಂದ ರಾಜ್ಯದ 11 ಜಿಲ್ಲೆಗಳಿಂದ ಆಯ್ದ ಅಭ್ಯರ್ಥಿಗಳ ನೇಮಕಾತಿ ರ‍್ಯಾಲಿಯು ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಇದೇ 30ರಿಂದ ಫೆ. 10ರವರೆಗೆ ನಡೆಯಲಿದೆ.

ಅಗ್ನಿವೀರ್‌ ಸಾಮಾನ್ಯ ಕರ್ತವ್ಯ, ಅಗ್ನಿವೀರ್ (ತಾಂತ್ರಿಕ), ಅಗ್ನಿವೀರ್ (ಕ್ಲರ್ಕ್‌)/ ಸ್ಟೋರ್ ಕೀಪರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್‌ಮನ್ 10ನೇ, ಅಗ್ನಿವೀರ್ ಟ್ರೇಡ್ಸ್‌ಮನ್ 8ನೇ ವಿಭಾಗಗಳಿಗೆ ಇಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ವಿವಿಧ ವಿಭಾಗಗಳ ಅಗ್ನಿವೀರರ ನೇಮಕಾತಿಗಾಗಿ ಹಮ್ಮಿಕೊಂಡಿದ್ದ ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (ಸಿಇಇ) ಅರ್ಹತೆ ಪಡೆದ ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಅಭ್ಯರ್ಥಿಗಳು ಈ ರ‍್ಯಾಲಿಯಲ್ಲಿ ಭಾಗವಹಿಸಬಹುದು.

ಸೇನೆಯ ವಿವಿಧ ವಿಭಾಗಗಳ ನೇಮಕಾತಿ ಸಲುವಾಗಿ ಈ ರ‍್ಯಾಲಿಯನ್ನು ಆಯೋಜಿಸಲಾಗಿದೆ. ಆಯಾ ವರ್ಗಕ್ಕೆ ಅಗತ್ಯವಿರುವ ವಯಸ್ಸು, ಶಿಕ್ಷಣ, ಅರ್ಹತೆ, ಹಾಗೂ ನೇಮಕಾತಿ ಮಾನದಂಡಗಳಿಗೆ ಸಂಬಂಧಿಸಿದ ವಿವರಗಳನ್ನು ಸೇನಾ ನೇಮಕಾತಿಯ ಮಂಗಳೂರು ಕಚೇರಿಯು ಇದೇ 2025ರ ಮಾ. 11ರಂದು ಅಧಿಸೂಚನೆಯಲ್ಲಿ ಪ್ರಕಟಿಸಿದೆ. ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶವನ್ನು ವೆಬ್‌ಸೈಟ್‌ನಲ್ಲಿ (www.joinindianarmy.nic.in.) ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ತಮ್ಮ ವೈಯಕ್ತಿಕ ಖಾತೆ ಮತ್ತು ನೋಂದಾಯಿತ ಇ-ಮೇಲ್ ಐಡಿ ದಾಖಲಿರುವ ಮೂಲಕ ಈ ವೆಬ್‌ಸೈಟ್‌ನಲ್ಲಿ ಈ ಕುರಿತ ವಿವರಗಳನ್ನು ತಿಳಿದುಕೊಳ್ಳಬಹುದು.

ದಲ್ಲಾಳಿಗಳ ಅಥವಾ ಏಜೆಂಟರು ಎಂದು ಹೇಳಿಕೊಂಡು ವಂಚಿಸುವವರ ಬಲೆಗೆ ಅಭ್ಯರ್ಥಿಗಳು ಬೀಳಬಾರದು. ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಹಾಗೂ ನೇಮಕಾತಿ ರ‍್ಯಾಲಿಯಲ್ಲಿ ಅಭ್ಯರ್ಥಿಗಳು ತೋರುವ ನಿರ್ವಹಣೆ ಆಧಾರದಲ್ಲಿ ಹಾಗೂ ಅರ್ಹತೆ ಆಧಾರದಲ್ಲಿ ಆಯ್ಕೆ ನಡೆಯಲಿದೆ ಎಂದು ಮಂಗಳೂರಿನ ಸೇನಾ ನೇಮಕಾತಿ ಕಚೇರಿಯ ಪ್ರಕಟಣೆ ತಿಳಿಸಿದೆ.

You may also like