Home » Medical Student : ವೈದ್ಯಕೀಯ ವ್ಯಾಸಂಗ ಮಾಡುವ ವಿದ್ಯಾರ್ಥಿಗಳೇ ಗಮನಿಸಿ | ನಿಮಗಿದೆ ಒಂದು ಮಹತ್ವದ ಮಾಹಿತಿ

Medical Student : ವೈದ್ಯಕೀಯ ವ್ಯಾಸಂಗ ಮಾಡುವ ವಿದ್ಯಾರ್ಥಿಗಳೇ ಗಮನಿಸಿ | ನಿಮಗಿದೆ ಒಂದು ಮಹತ್ವದ ಮಾಹಿತಿ

0 comments

ಓದುವ ಪ್ರತಿ ವಿದ್ಯಾರ್ಥಿಯು ಕೂಡ ಭವಿಷ್ಯದ ಬಗ್ಗೆ ನೂರಾರು ಕನಸುಗಳನ್ನು ಹೊತ್ತು ವ್ಯಾಸಂಗ ಮಾಡಿ , ಉತ್ತಮ ಹುದ್ದೆ ಪಡೆಯುವ ತವಕದಿಂದ ಅವರ ಗುರಿಯ ಕಡೆ ಮುಖ ಮಾಡುವುದು ಸಾಮಾನ್ಯ. ಆದರೆ, ಕೆಲವರ ಆರ್ಥಿಕ ಪರಿಸ್ಥಿತಿ ಜೊತೆಗೆ ಮನೆಯ ವಾತಾವರಣದಿಂದ ಪುಸ್ತಕ ಹಿಡಿಯಬೇಕಾದ ಅದೆಷ್ಟೋ ಕೈಗಳು ಕೆಲಸದತ್ತ ಮುಖ ಮಾಡುವ ಸ್ಥಿತಿ ಎದುರಾಗಿದೆ. ಅದರಲ್ಲೂ ವೈದ್ಯಕೀಯ ವ್ಯಾಸಂಗದ ಕನಸು ಹೊತ್ತರಂತೂ ಕೈಗೆ ಎಟುಕದ ನಕ್ಷತ್ರದಂತೆ ಎನ್ನುವಂತಹ ವಾತಾವರಣ ಸೃಷ್ಟಿಯಾಗಿದೆ.

ನಮ್ಮ ಕರ್ನಾಟಕ ರಾಜ್ಯ ಸೇರಿದಂತೆ, ದೇಶದಲ್ಲಿ ವೈದ್ಯಕೀಯ ವ್ಯಾಸಂಗ ಮಾಡೋದಕ್ಕೆ ಲಕ್ಷ ಲಕ್ಷ ಹಣವನ್ನು ನೀರಿನ ಹೊಳೆಯಂತೆ ಖರ್ಚು ಮಾಡಬೇಕಾಗಿರುವ ಸಂಗತಿ ಎಲ್ಲರಿಗೂ ತಿಳಿದಿರುವುದೇ!!. ಉಳ್ಳವರು ಲಕ್ಷ ಲಕ್ಷ ಹಣ ಕಟ್ಟಿ ವೈದ್ಯಕೀಯ ಶಿಕ್ಷಣ ಪಡೆದರೆ ಮಧ್ಯಮ ವರ್ಗದ ಮಂದಿಗೆ ಮಾತ್ರ ವೈದ್ಯಕೀಯ ಶಿಕ್ಷಣ ಪಡೆಯುವುದು ಕಷ್ಟ ಸಾಧ್ಯವಾಗಿದೆ. ಹಾಗಾಗಿ, ಹೆಚ್ಚಿನ ಮಂದಿ ಹೊರ ದೇಶಗಳಲ್ಲಿ ಕಡಿಮೆ ಖರ್ಚಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಸೇರ್ಪಡೆಗೊಳ್ಳುತ್ತಾರೆ.

ಇತ್ತೀಚಿನ ಕೆಲವು ತಿಂಗಳ ಹಿಂದೆ, ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ದ ಪ್ರಾರಂಭವಾದಾಗ ನಮ್ಮ‌ ದೇಶದ ಅದೆಷ್ಟು ಮಂದಿ ವಿದ್ಯಾರ್ಥಿಗಳು ಈ ವೈದ್ಯಕೀಯ ಶಿಕ್ಷಣ ಪಡೆಯಲು ಉಕ್ರೇನ್ ಗೆ ತೆರಳಿದ್ದವರು ಭಾರತಕ್ಕೆ ಮರಳಲು ಹರಸಾಹಸ ಪಟ್ಟದ್ದು , ಹೊರದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಪೋಷಕರು ಭಾರತಕ್ಕೆ ಮಕ್ಕಳನ್ನು ಕರೆಸಲು, ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು ತಿಳಿದಿರುವ ವಿಚಾರ. ಆ ಸಂದರ್ಭ ನಮ್ಮ ದೇಶ, ರಾಜ್ಯದಲ್ಲಿ ಕಡಿಮೆ ಖರ್ಚಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವುದಕ್ಕೆ ಅವಕಾಶ ಕಲ್ಪಿಸಲು ಒತ್ತಾಯಕ್ಕೆ ಸರ್ಕಾರವೂ ಈ ಬಗ್ಗೆ ಪರಿಶೀಲಿಸುವ ಭರವಸೆಯನ್ನು ನೀಡಿತ್ತು.‌ ಆದರೆ, ವೈದ್ಯಕೀಯ ಶಿಕ್ಷಣದ ವೆಚ್ಚ ಕಡಿಮೆಗೊಳಿಸಬೇಕಾಗಿದ್ದ ಸರ್ಕಾರ ಇದೀಗ ವಿಧ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್ ನೀಡಿದೆ. ವೈದ್ಯಕೀಯ ಕೋರ್ಸ್ ಪ್ರವೇಶ ಶುಲ್ಕವನ್ನು ಶೇ.10 ಹೆಚ್ಚಳಗೊಳಿಸಲು ಸಮ್ಮತಿ ಸೂಚಿಸಿ ಗಾಯದ ಮೇಲೆ ಬರೆ ಹಾಕಿದಂತಹ ಪರಿಸ್ಥಿತಿ ವೈದ್ಯಕಿಯ ವಿದ್ಯಾರ್ಥಿಗಳಿಗೆ ಎದುರಾಗಿದೆ.

2022-23 ನೇ ಸಾಲಿನ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶ ಶುಲ್ಕವನ್ನು ಶೇ.10ರಂತೆ ಹೆಚ್ಚಿಸಿಲು ಸರ್ಕಾರ ಒಪ್ಪಿಗೆ ನೀಡಿದ್ದು, ಈ ಬಗ್ಗೆ ಸದ್ಯದ ದಿನಗಳಲ್ಲೆ ಆದೇಶ ಹೊರಬೀಳುವ ಸಾಧ್ಯತೆಯಿದೆ. ವೈದ್ಯಕೀಯ ಕಾಲೇಜುಗಳ ಒಕ್ಕೂಟ ಇತ್ತಿಚೇಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶೇ.15ರಷ್ಟು ಶುಲ್ಕ ಹೆಚ್ಚಳಕ್ಕೆ ಬೇಡಿಕೆಯನ್ನು ಮುಂದಿಟ್ಟಿದ್ದು, ಆದರೆ, ಸರ್ಕಾರ ಮಾತ್ರ ಶೇ.10ರಷ್ಟು ಹೆಚ್ಚಳಕ್ಕೆ ತೀರ್ಮಾನ ಕೈಗೊಂಡಿದೆ. ಸಿ.ಎಂ ಬಸವರಾಜ ಬೊಮ್ಮಾಯಿಯವರ ಅನುಮತಿ ಪಡೆದು ಅಧಿಕೃತ ಆದೇಶ ಹೊರಡಿಸಲು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಇತ್ತಿಚೇಗಷ್ಟೇ ಸಭೆ ನಡೆದಿದ್ದು ಶೇ.10 ರಷ್ಟು ಶುಲ್ಕ ಹೆಚ್ಚಳಕ್ಕೆ ಎಲ್ಲರೂ ಸಮ್ಮತಿಸಿದ್ದಾರೆ. ಆದ್ರೆ ಸೀಟು ಹಂಚಿಕೆಯಲ್ಲಿ ಮಾತ್ರ ಹಳೆಯ ಶೇಕಡವಾರು ಪದ್ದತಿ ಮುಂದುವರಿಯೋದು ದೃಢವಾಗಿದೆ. ಸರ್ಕಾರಿ ಕಾಲೇಜುಗಳಲ್ಲು ಈ ಶುಲ್ಕ ಹೆಚ್ಚಳವಾಗುವುದಿಲ್ಲ ಆದರೆ, ಖಾಸಗಿ ಕಾಲೇಜಿನಲ್ಲಿರುವ ಸರ್ಕಾರಿ ಕೋಟಾ ಶುಲ್ಕವು ಹೆಚ್ಚಳವಾಗಿದೆ.

ಈ ಹಿಂದೆ ಈ ಶುಲ್ಕ1,28,746 ರೂ ಇದ್ದರೆ ಇನ್ನು 10% ಹೆಚ್ಚಳದಿಂದಾಗಿ 1,41,620 ರೂ ಆಗಲಿದೆ. ಇನ್ಮು ಖಾಸಗಿ ಕಾಲೇಜಿನಲ್ಲಿ ಎಂಬಿಬಿಎಸ್ ಶುಲ್ಕ 9,81,956 ರೂ ಇದೆ. ಪರಿಷ್ಕೃತ ಶುಲ್ಕ 10,80,152 ರೂಗಳಿಗೆ ಏರಿಕೆ ಆಗಲಿದೆ. ಒಟ್ಟಿನಲ್ಲಿ ಸರ್ಕಾರ ಈ ರೀತಿಯಾಗಿ ಶುಲ್ಕ ಹೆಚ್ಚಳ ಮಾಡುತ್ತ ಹೋದರೆ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಪಾಲಿಗೆ ಗಗನ ಕುಸುಮವಾಗುವುದಂತು ಕಟುಸತ್ಯ.

You may also like

Leave a Comment