ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಪರಿಶೀಲಿಸುವ ಸಲುವಾಗಿ, ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಿರುವ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ 5ನೇ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿರ್ಧರಿಸಿದೆ.
ನವೆಂಬರ್ 2022 ರಿಂದ ಮಾರ್ಚ್ 2023ರ ವರೆಗೆ ಪಠ್ಯಪುಸ್ತಕದ ಆಧಾರದ ಮೇಲೆ ವಾರ್ಷಿಕ ಪರೀಕ್ಷೆಗಳು ನಡೆಯುತ್ತವೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಈ ವಾರ್ಷಿಕ ಪರೀಕ್ಷೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಶ್ನೆ ಪತ್ರಿಕೆಯನ್ನು ತಯಾರಿಸಲಿದ್ದು, ಪ್ರತಿ ಜಿಲ್ಲೆಗೂ ಪ್ರಶ್ನೆಪತ್ರಿಕೆಗಳನ್ನು ಸರಬರಾಜು ಮಾಡಿ, ಶಾಲಾ ಹಂತದಲ್ಲಿ ಪರೀಕ್ಷೆಯನ್ನು ನಡೆಸಲಿದ್ದು, ಪರೀಕ್ಷೆಯ ನಂತರ ಮೌಲ್ಯಾಂಕನ ವಿಶ್ಲೇಷಣೆಯಲ್ಲಿ ಯಾವ ಕಲಿಕಾ ವಿಷಯ, ಶಾಲೆ ಮತ್ತು ತಾಲೂಕುಗಳು ಕುಂಠಿತವಾಗಿದೆ ಎಂದು ಗುರುತಿಸಲಾಗುತ್ತದೆ.
ಮಾರ್ಚ್‌ನಲ್ಲಿ 5ನೇ ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆ ನಡೆಯಲಿದ್ದು, ಈ ಪರೀಕ್ಷೆ 2 ಗಂಟೆಯ ಅವಧಿಯದ್ದಾಗಿದ್ದು, 50 ಅಂಕಗಳನ್ನು ನಿಗಧಿ ಮಾಡಲಾಗಿದೆ. ಈ 50 ಅಂಕದಲ್ಲಿ 40 ಅಂಕ ಲಿಖಿತ ಪರೀಕ್ಷೆ ಆಗಿದ್ದು, 10 ಅಂಕ ಮೌಖಿಕ ಪರೀಕ್ಷೆ ನಡೆಯಲಿದೆ. ಕಲಿಕಾ ಚೇತರಿಕೆ ಪಠ್ಯಕ್ರಮದ ಅಡಿಯಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ವಾರ್ಷಿಕ ಪರೀಕ್ಷಾ ವೇಳಾಪಟ್ಟಿ :
- 2023ರ ಮಾರ್ಚ್ 9 ರಿಂದ ಮಾರ್ಚ್ 17 ರವರೆಗೆ ಪರೀಕ್ಷೆ ನಡೆಯುತ್ತದೆ.
- ಮಾರ್ಚ್ 21 – 28 ರವರೆಗೆ ಮೌಲ್ಯಮಾಪನ ನಡೆಯಲಿದೆ.
- ಮಾರ್ಚ್ 31 ರಿಂದ ಏಪ್ರಿಲ್ 5 ರವರೆಗೆ ಫಲಿತಾಂಶ ಸಿದ್ಧಪಡಿಸಲಿದ್ದು,
- ಏಪ್ರಿಲ್ 8 – 10 ರ ಮಧ್ಯೆ ಫಲಿತಾಂಶದ ಪ್ರಕಟಣೆಗೆ ತಾತ್ಕಾಲಿಕ ವೇಳಾಪಟ್ಟಿಯನ್ನು ಸಿದ್ದಪಡಿಸಲಾಗಿದೆ.
ಶಾಲಾವಾರು ವಿದ್ಯಾರ್ಥಿಗಳ ಸಂಖ್ಯೆಯ ಆಧಾರದ ಮೇಲೆ, 5ನೇ ತರಗತಿ ಪರೀಕ್ಷೆಯ ಒಂದು ಕೇಂದ್ರದಲ್ಲಿ ಕನಿಷ್ಠ 25 ವಿದ್ಯಾರ್ಥಿಗಳು ಇರಲಿದ್ದು, 8ನೇ ತರಗತಿ ಪರೀಕ್ಷಾ ಕೇಂದ್ರದಲ್ಲಿ ಕನಿಷ್ಠ 50 ವಿದ್ಯಾರ್ಥಿಗಳು ಇರಲಿದ್ದಾರೆ.
