ಬೆಂಗಳೂರು: ಸರಕಾರಿ ಭೂಮಿ, ಗೋಮಾಳ, ಅರಣ್ಯ ಪ್ರದೇಶದಲ್ಲಿ ಬಹು ವರ್ಷದಿಂದ ನಿರ್ಮಾಣಗೊಂಡ ದೇವಸ್ಥಾನಗಳು ಜಾಗ ಬಯಸಿ ಕಾನೂನು ಪ್ರಕಾರ ಸರಕಾರಕ್ಕೆ ಅರ್ಜಿ ಸಲ್ಲಿಸಿದರೆ ಸಂಪುಟ ಸಭೆಯಲ್ಲಿ ಚರ್ಚಿಸಿ ಆ ದೇವಸ್ಥಾನಕ್ಕೆ ಜಾಗ ಮಂಜೂರು ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಅವರು ವಿಧಾನಸಭೆಯ ಅಧಿವೇಶನದ ಪ್ರಶ್ನೋತ್ತರ ಕಲಾಪದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಅವರು, ಕೆಲವು ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗವನ್ನು ವೈಯಕ್ತಿಕವಾಗಿ ಮಂಜೂರು ಮಾಡಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಈ ರೀತಿ ಆಗಬಾರದು ಎಂದರು. ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ದೇವಸ್ಥಾನಗಳಿಗೆ ಜಾಗ ಮಂಜೂರು ಮಾಡುವುದಾಗಿ ಹೇಳಿತ್ತು. ಕೆಲವು ಕಡೆಗಳಲ್ಲಿ ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗದಲ್ಲಿ ಕಾಫಿ, ಅಡಿಕೆ, ಹೂ ತೋಟ ಮಾಡಿಕೊಂಡಿದ್ದಾರೆ. ಆ ದೇವಸ್ಥಾನಗಳಿಗೆ ಜಾಗ ಮಂಜೂರು ಮಾಡಿಕೊಡುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.
ಈ ಪ್ರಶ್ನೆಗೆ ಉತ್ತರಿಸಿದ ಸಚಿವ ಆರ್.ಅಶೋಕ್, ಅರ್ಜಿ ಸಲ್ಲಿಸಿದರೆ ಜಾಗ ಮಂಜೂರು ಮಾಡುವ ಬಗ್ಗೆ ಪರಿಶೀಲಿಸುವುದಾಗಿ ಹೇಳಿದರು.
