Arecanut Price: ಕೃಷಿಯನ್ನು ನೆಚ್ಚಿಕೊಂಡಿರುವ ಅನ್ನದಾತರಿಗೆ ಸಿಹಿ ಸುದ್ದಿ ಲಭ್ಯವಾಗುವ ಸಾಧ್ಯತೆ ದಟ್ಟವಾಗಿದೆ. ಕೆಲವೊಂದು ಮೂಲಗಳ ಪ್ರಕಾರ, ಅಡಿಕೆ ಧಾರಣೆ ಮತ್ತಷ್ಟು ಹೆಚ್ಚಾಗುವ ಸಂಭವವಿದೆ. ಕಳೆದ ವರ್ಷದ ಕೊನೆಯಲ್ಲಿ ಕುಸಿತ ಕಂಡಿದ್ದ ಅಡಿಕೆ ಧಾರಣೆ (Areca Nut Price) ಮತ್ತೆ ಚೇತರಿಕೆಯ ಹಾದಿ ಹಿಡಿದಿದ್ದು 47,000 ರೂ.ಗಡಿ ದಾಟಿದ್ದು, ಕೆಲ ದಿನಗಳಿಂದ ಅಡಿಕೆ ದರವು ₹ 50,000 ತಲುಪಿದ್ದು, ಅಡಿಕೆ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಲು ಕಾರಣವಾಗಿದೆ.
ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಅಡಿಕೆ ದರ ವಿವಿಧ ಜಿಲ್ಲೆಗಳ ಮಾರುಕಟ್ಟೆಗಳಲ್ಲಿ ತುಸು ವ್ಯತ್ಯಾಸವಿರುವುದು ಸಹಜ. ಕೆಲವೊಂದು ಮೂಲಗಳ ಪ್ರಕಾರ, ಅಡಿಕೆ ಧಾರಣೆ ಮತ್ತಷ್ಟು ಹೆಚ್ಚಾಗುವ ಸಂಭವವಿದೆ ಎನ್ನಲಾಗಿದೆ. ಕಳೆದ ವರ್ಷ ಭೂತಾನ್ನಿಂದ ಅಡಿಕೆ ಆಮದು ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಿದ ಬಳಿಕ ಅಡಿಕೆ ಧಾರಣೆಯಲ್ಲಿ ಕೊಂಚ ಇಳಿಕೆ ಕಂಡಿತ್ತು. ಡಿಸೆಂಬರ್ನಲ್ಲಿ ಕ್ವಿಂಟಲ್ಗೆ 39,000 ರೂ.ವರೆಗೆ ದರ ಕುಸಿತ ಕಂಡಿತ್ತು. ಆದರೆ, ಇದೀಗ ಮತ್ತೆ ಚೇತರಿಕೆ ಕಂಡು ಬರುತ್ತಿದೆ. ಇದರಿಂದ ಉತ್ಸಾಹಿತರಾದ ಬೆಳೆಗಾರರು ದಾಸ್ತಾನು ಮಾಡಿದ್ದ ಅಡಿಕೆ ಮಾರಾಟ ಮಾಡುವತ್ತ ಗಮನ ಹರಿಸಿದ್ದಾರೆ. ಇದರ ಜೊತೆಗೆ ಹೊಸ ಅಡಿಕೆ ಕೊಯ್ಲು ಕೂಡ ನಡೆಯುತ್ತಿದ್ದು, ಬೆಲೆ ಹೆಚ್ಚಳದಿಂದ ಅಡಿಕೆ ಬೆಳೆಗಾರರಲ್ಲಿ ಸಂತೋಷ ಮನೆ ಮಾಡಿದೆ.
‘ಭೂತಾನ್ ಅಡಿಕೆ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿತ್ತು. ಇದರಿಂದ ಅಡಿಕೆ ದರ ಕುಸಿತ ಕಾಣುವುದೋ ಎಂಬ ಭೀತಿ ಹೆಚ್ಚಿನ ಮಂದಿಗೆ ಕಾಡುತ್ತಿತ್ತು. ಈಗ ಕೇಂದ್ರ ಸರ್ಕಾರ ಆಮದು ಅಡಿಕೆಯ ಮೇಲೆ ಕ್ವಿಂಟಲ್‌ಗೆ ₹ 351 ಶುಲ್ಕ ವಿಧಿಸಿದ್ದು, ಸ್ಥಳೀಯ ತೆರಿಗೆಗಳನ್ನೊಳಗೊಂಡು ₹ 361 ಶುಲ್ಕವಾಗುತ್ತದೆ. ಅದೇ ರೀತಿ, ಆಮದು ಅಡಿಕೆಯಲ್ಲಿ ಗುಣಮಟ್ಟವಿರುವ ಸಂಭವ ಕಮ್ಮಿ. ಗುಟ್ಕಾ ಕಂಪನಿಯವರು ಗುಟ್ಕಾ ತಯಾರಿಸಲು ಹೆಚ್ಚಾಗಿ ಗುಣಮಟ್ಟದ ಅಡಿಕೆಯನ್ನು ಉಪಯೋಗಿಸುವುದರಿಂದ ದೇಶಿಯ ಅಡಿಕೆಗೆ ಬೇಡಿಕೆ ಹೆಚ್ಚಿದೆ.
ಸಾಮಾನ್ಯವಾಗಿ ಹೊಸ ರಾಶಿ ಅಡಿಕೆ ಮಾರುಕಟ್ಟೆಗೆ ಬಂದ ಮೇಲೆ ಅಡಿಕೆ ದರದಲ್ಲಿ ಕುಸಿತ ಕಾಣುವ ಸಂಭವ ಹೆಚ್ಚು. ಹೀಗಾಗಿ, ಹೊಸ ಅಡಿಕೆ ಒಂದು ತಿಂಗಳಿಂದ ಮಾರುಕಟ್ಟೆಗೆ ಬರುತ್ತಿರುವ ಜೊತೆಗೆ ಪ್ರಸ್ತುತ ಹೊಸ ಅಡಿಕೆ ದರ ಕ್ವಿಂಟಲ್‌ಗೆ ಕನಿಷ್ಠ ₹ 42,051 ಆಗಿದ್ದು, ಗರಿಷ್ಠ ಬೆಲೆ ₹ 49,581 ಆಗಿದೆ. ಇದರ ಜೊತೆಗೆ ಸರಾಸರಿ ₹ 46,560ಕ್ಕೆ ಮಾರಾಟವಾಗುತ್ತಿದೆ. ಹಳೆಯ ರಾಶಿ ಅಡಿಕೆ ದರ ಕ್ವಿಂಟಲ್‌ಗೆ ಕನಿಷ್ಠ ₹ 46,512 ಆಗಿದ್ದು, ಗರಿಷ್ಠ ₹ 50,379 ಆಗಿದೆ. ಅಡಿಕೆ ದರ ಸರಾಸರಿ ₹ 49,237ಕ್ಕೆ ಮಾರಾಟವಾಗುತ್ತಿದೆ. ಹಳೆಯ ರಾಶಿ ಮತ್ತು ಹೊಸ ಅಡಿಕೆ ದರದಲ್ಲಿ ದೊಡ್ಡ ಮಟ್ಟದ ವ್ಯತ್ಯಾಸವಿಲ್ಲದ ಹಿನ್ನೆಲೆ ಅಡಿಕೆ ಬೆಳೆಗಾರರು ಬೇಗ ಬೇಗ ಅಡಿಕೆ ಕೊಯ್ಲು ಮಾಡಿ ಅಡಿಕೆ ಮಾರಾಟ ಮಾಡುವತ್ತ ಚಿತ್ತ ವಹಿಸಿದ್ದಾರೆ.
