Girl Death: ಕೆಲವೊಮ್ಮೆ ಪರಿಸ್ಥಿತಿ ನಮ್ಮ ಕೈ ಮೀರಿ ಹೋಗುತ್ತವೆ. ಆದರೆ ಪರಿಣಾಮ ಮಾತ್ರ ಘೋರವಾಗಿರುವುದು ಅಷ್ಟೇ ಸತ್ಯವಾದ ಮಾತು. ಹೌದು, ಬಾಳಿ ಬದುಕಬೇಕಿದ್ದ ಬಾಲಕಿ, ಆಟವಾಡುತ್ತಿದ್ದ ಸ್ಥಳದಲ್ಲಿ ಹೆಣವಾಗಿ (Girl Death) ಕಂಡಾಗ ಹೆತ್ತವರ ಪಾಡು ನೋಡಲು ಸಾಧ್ಯವಿಲ್ಲ.
ಮೂಲತಃ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಮಾಚಿಘಡ ಗ್ರಾಮದವಳಾಗಿದ್ದ ಮಧುರಾ ಮೋರೆ ಎಂಬ ಬಾಲಕಿ ಶಾಲೆಗೆ ರಜೆಯಿದ್ದ ಕಾರಣ ಮಚ್ಛೆ ಗ್ರಾಮದಲ್ಲಿದ್ದ ಸೋದರಮಾವನ ಮನೆಗೆ ಬಂದಿದ್ದಳು. ಎಂಟು ದಿನಗಳ ಹಿಂದೆ ಸೋದರಮಾವ ಪ್ರಸಾದ್ ಮನೆಗೆ ಬಂದಿದ್ದ ಬಾಲಕಿ ಮಧುರಾ, ಮೇ.22 ಸಂಜೆ 6 ಗಂಟೆ ಸುಮಾರಿಗೆ ಮಹಡಿ ಮೇಲೆ ಒಂದೂವರೆ ವರ್ಷದ ಮಾವನ ಮಗನನ್ನು ಕರೆದುಕೊಂಡು ಹೋಗಿ ಆಟವಾಡುತ್ತಿದ್ದಳು.
ಮಹಡಿ ಮೇಲೆ ಆಟವಾಡಲು ಹೋಗಿದ್ದ ಬಾಲಕಿ ಏಕಾಏಕಿ ನಾಪತ್ತೆಯಾಗಿದ್ದಳು. ಕುಟುಂಬಸ್ಥರು ಶೋಧಕಾರ್ಯ ನಡೆಸಿದಾಗ ಪಕ್ಕದ ಮನೆಯ ಮಹಡಿ ಮೇಲೆ ಶವವಾಗಿ ಪತ್ತೆಯಾಗಿದ್ದಳು.
ಹೌದು, ಆಟವಡುತ್ತಿದ್ದ ಬಾಲಕಿ ಈ ವೇಳೆ ಅದೇಕೋ ಗೊತ್ತಿಲ್ಲ ಮಹಡಿ ಮೇಲಿನ ಕಿರಿದಾದ ಕಾಂಪೌಂಡ್ ಮೇಲೆ ಹತ್ತಿದ್ದಾಳೆ. ಆಗ ಮಹಡಿ ಮೇಲೆ ಹಾದು ಹೋದ ವಿದ್ಯುತ್ ತಂತಿ ಸ್ಪರ್ಶಿಸಿ ಪಕ್ಕದ ಮನೆಯ ಮಹಡಿ ಮೇಲೆ ಬಿದ್ದಿದ್ದಾಳೆ. ಈ ವೇಳೆ ಮನೆಯವರಿಗೆ ಏನೋ ಸ್ಫೋಟವಾದ ರೀತಿ ಶಬ್ದ ಕೇಳಿಸಿದೆ. ತಕ್ಷಣ ಮಹಡಿ ಮೇಲೆ ಬಂದು ನೋಡಿದಾಗ ಒಂದೂವರೆ ವರ್ಷದ ಮಗು ಮಾತ್ರ ಕಾಣಿಸಿದೆ. ಮಧುರಾ ಕಾಣದಿದ್ದಾಗ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಪಕ್ಕದ ಮನೆಯ ಮಹಡಿ ಮೇಲೆ ಬಾಲಕಿ ಮೃತದೇಹ ಸಿಕ್ಕಿದೆ.
ಮಾಹಿತಿ ಪ್ರಕಾರ ಹಲವು ವರ್ಷಗಳ ಹಿಂದೆ ಪ್ರಸಾದ್ ಬೋಂಗಾಳೆ ಇಲ್ಲಿ ಸಿಮೆಂಟ್ ಮಳಿಗೆ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದು. ಎಂಟು ವರ್ಷಗಳ ಹಿಂದೆ ಮಳಿಗೆಯ ಮೇಲೆ ಮನೆ ಕಟ್ಟಿದ್ದಾರೆ. ಈ ವೇಳೆ ವಿದ್ಯುತ್ ಕಂಬ ತೆರವಿಗೆ ಹೆಸ್ಕಾಂಗೆ ಹಲವು ಬಾರಿ ಮನವಿ ಮಾಡಿದ್ದರಂತೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲವಂತೆ. ಹೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯದಿಂದಲೇ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಅದಲ್ಲದೆ ಈಗಾಗಲೇ ಮನೆ ಮಾಲೀಕ ಪ್ರಸಾದ್ ಒಂದೂವರೆ ವರ್ಷದ ಹಿಂದೆ ನನಗೂ ಸಹ ಶಾಕ್ ಹೊಡೆದಿತ್ತು. ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ವಿದ್ಯುತ್ ಪರಿವೀಕ್ಷಕರಾದ ರೇಣುಕಾ, ಹೆಸ್ಕಾಂ ಸೆಕ್ಷನ್ ಆಫೀಸರ್ ಐ.ಡಿ.ಲೋಬೋ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಹೆಸ್ಕಾಂ ಸೆಕ್ಷನ್ ಆಫೀಸರ್ ‘ವಿದ್ಯುತ್ ತಂತಿ ಹಾದು ಹೋಗಿದ್ದು, ಮನೆ ಕಟ್ಟದಂತೆ ಹಿಂದೆಯೇ ನೋಟಿಸ್ ನೀಡಲಾಗಿತ್ತು. ಮೊದಲೇ ಇಲ್ಲಿ ವಿದ್ಯುತ್ ತಂತಿ ಹಾದು ಹೋಗಿತ್ತು, ಈ ವೇಳೆ ಮಳಿಗೆ ಕಟ್ಟಿಕೊಂಡಿದ್ದರು. ಆಗ ಇಲ್ಲಿ ಮನೆ ಕಟ್ಟದಂತೆ ಹಿಂದಿನ ಸೆಕ್ಷನ್ ಆಫೀಸರ್ ನೋಟಿಸ್ ನೀಡಿದ್ದರು. ಆದರೂ ಮನೆ ಕಟ್ಟಿಕೊಂಡಿದ್ದರು. ಕುಟುಂಬಸ್ಥರು ವಿದ್ಯುತ್ ತಂತಿ ತೆರವಿಗೆ ಮನವಿ ಮಾಡಿದಾಗ ಎಸ್ಟಿಮೇಟ್ ಮಾಡಿ ಕೊಟ್ಟಿದ್ವಿ ಎಂದಿದ್ದಾರೆ.
ಒಂದೆಡೆ ಬಾಲಕಿ ಸಾವಿಗೆ ಹೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯ ಕಾರಣ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಮತ್ತೊಂದೆಡೆ ಮನೆ ಕಟ್ಟುವ ಮೊದಲೇ ಇಲ್ಲಿ ಮನೆ ಕಟ್ಟದಂತೆ ನೋಟಿಸ್ ನೀಡಿದ್ವಿ ಎಂದು ಹೆಸ್ಕಾಂ ಸಿಬ್ಬಂದಿ ಕಾರಣ ನೀಡುತ್ತಿದ್ದಾರೆ. ಆದ್ರೆ, ಇದೆಲ್ಲದರ ಮಧ್ಯೆ ತನ್ನದಲ್ಲದ ತಪ್ಪಿಗೆ 13 ವರ್ಷದ ಮುಗ್ಧ ಬಾಲಕಿ ಮಧುರಾ ಕೊನೆ ಉಸಿರೆಳೆದಿದ್ದಾಳೆ.
ಸದ್ಯ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಬಾಲಕಿಯ ಮರಣೋತ್ತರ ಪರೀಕ್ಷೆ ನೆರವೇರಿದ್ದು, ಬಳಿಕ ಮೃತದೇಹವನ್ನು ಸ್ವಗ್ರಾಮ ಮಾಚಿಘಡಗೆ ಕಾರಿನಲ್ಲಿ ಸ್ಥಳಾಂತರಿಸಿದರು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಇದನ್ನೂ ಓದಿ:Rain Alert: ರಾಜ್ಯದಲ್ಲಿ ವರುಣನ ಆರ್ಭಟ! ಹಲವು ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್ ಘೋಷಣೆ!
