Home » ತನ್ನ ಮಾಲೀಕನನ್ನೇ ಭೀಕರವಾಗಿ ಕೊಂದ ಒಂಟೆ! ಸಿಟ್ಟಿಗೆದ್ದ ಜನ ಅದೇ ಒಂಟೆಯನ್ನು ಮರಕ್ಕೆ ಕಟ್ಟಿ, ಹೊಡೆದು ಸಾಯಿಸೇ ಬಿಟ್ರು!!

ತನ್ನ ಮಾಲೀಕನನ್ನೇ ಭೀಕರವಾಗಿ ಕೊಂದ ಒಂಟೆ! ಸಿಟ್ಟಿಗೆದ್ದ ಜನ ಅದೇ ಒಂಟೆಯನ್ನು ಮರಕ್ಕೆ ಕಟ್ಟಿ, ಹೊಡೆದು ಸಾಯಿಸೇ ಬಿಟ್ರು!!

by ಹೊಸಕನ್ನಡ
0 comments

ಪ್ರಾಣಿಗಳಿಗೆ ನಾವು ಪ್ರೀತಿ ತೋರಿದರೆ ಪ್ರತಿಯಾಗಿ ಅವು ಕೂಡ ನಮಗೆ ತಮ್ಮ ಪ್ರೀತಿಯನ್ನು ನೀಡುತ್ತವೆ. ಈ ರೀತಿಯ ವರ್ತನೆಗಳನ್ನು ಹೆಚ್ಚಾಗಿ ಸಾಕು ಪ್ರಾಣಿಗಳಲ್ಲಿ ಕಾಣಲು ಸಾಧ್ಯ. ಆದರೆ ಕೆಲವೊಮ್ಮೆ ಅವುಗಳಿಗೆ ಕೋಪವೇನಾದರು ಬಂದರೆ ಅದನ್ನು ನಿಯಂತ್ರಿಸುವುದು ಬಹಳ ಕಷ್ಟ. ಕೆಲವೊಮ್ಮೆ ಅವು ನಮ್ಮ ಜೀವಕ್ಕೆ ಕುತ್ತು ತಂದುಬಿಡುತ್ತವೆ. ಇದೀಗ ಇಂತದೇ ಒಂದು ಘಟನೆ ಬೆಳಕಿಗೆ ಬಂದಿದ್ದು, ಉದ್ರೇಕಗೊಂಡಿದ್ದ ಒಂಟೆಯೊಂದು ತನ್ನ ಮಾಲೀಕನನ್ನೇ ಕೊಂದು ಹಾಕಿದೆ. ಇದರಿಂದ ಸಿಟ್ಟಗೆದ್ದ ಗ್ರಾಮಸ್ಥರು ಒಂಟೆಯನ್ನು ಮರಕ್ಕೆ ಕಟ್ಟಿ ದೊಣ್ಣೆಯಿಂದ ಹೊಡೆದು ಕೊಂದಿದ್ದಾರೆ.

ಹೌದು, ರಾಜಸ್ಥಾನದ ಬಿಕ್ನೇರ್‌ನ ಪಂಚು ಗ್ರಾಮದಲ್ಲಿ ಇಂತಹ ಒಂದು ಬೆಚ್ಚಿಬೀಳವಂತಹ ಪ್ರಕರಣ ಬೆಳಕಿಗೆ ಬಂದಿದೆ. ಸೋಮವಾರ ಸಂಜೆ ಈ ಘಟನೆ ನಡೆದಿದ್ದು, ಮಾಲೀಕನನ್ನು ತುಳಿದು ಸಾಯಿಸಿದ ಒಂಟೆಯನ್ನು ಜನ ಹೊಡೆದು ಸಾಯಿಸಿದ್ದಾರೆ. ಈ ಘಟನೆಯ ವಿವರಣೆಯನ್ನು ನೀವೇನಾದರು ಕೇಳಿದ್ರೆ ಗಾಬರಿ ಬೀಳೋದಂತೂ ಖಂಡಿತಾ!

ಗ್ರಾಮಸ್ಥರಿಂದ ಹತ್ಯೆಯಾದ ಒಂಟೆಯನ್ನು ಮೊದಲು ಮಾಲಿಕನು ಒಂದು ಕಂಬಕ್ಕೆ ಕಟ್ಟಿ ಹಾಕಿದ್ದನು. ಇದೇ ವೇಳೆ ಅಲ್ಲಿ ಸಾಗುತ್ತಿದ್ದ ಇನ್ನೊಂದು ಒಂಟೆಯನ್ನು ನೋಡಿದ ಈ ಒಂಟೆಯು ಉದ್ರೇಕಗೊಂಡು ತನ್ನನ್ನು ಕಟ್ಟಿ ಹಾಕಿದ ಕಂಬವನ್ನು ಮುರಿದುಕೊಂಡು ಅದರತ್ತ ಓಡಿ ಹೋಗಿದೆ. ಈ ವೇಳೆ ಒಂಟೆಯ ಮಾಲೀಕ ಸೋಹನ್ ರಾಮ್ ನಾಯಕ್ ತನ್ನ ಒಂಟೆಯನ್ನು ನಿಯಂತ್ರಿಸಲು ಅದರತ್ತ ಹೋಗಿದ್ದಾರೆ. ಆಗ, ಕೋಪಗೊಂಡು ಮಾಲೀಕನ ಮೇಲೆ ದಾಳಿ ನಡೆಸಿದ ಒಂಟೆ ಆತನನ್ನು ನೆಲಕ್ಕೆ ತಳ್ಳಿದೆ. ಅಲ್ಲದೆ ತನ್ನ ಮಾಲೀಕನನ್ನು ಕುತ್ತಿಗೆಯಲ್ಲಿ ಹಿಡಿದು ಮೇಲೆತ್ತಿದ್ದ ಒಂಟೆ ನಂತರ ಆತನನ್ನು ನೆಲಕ್ಕೆ ಕುಕ್ಕಿದೆ. ಬಳಿಕ ಆತನ ತಲೆಯನ್ನು ಜಗಿದಿದೆ. ಇಷ್ಟೊತ್ತಿಗಾಗಲೇ ಆತನ ಉಸಿರು ನಿಂತುಹೋಗಿತ್ತು.

ಈ ವಿಚಾರ ತಿಳಿದ ಸೋಹನ್ ರಾಮ್ ನಾಯಕ್ ಅವರ ಕುಟುಂಬದವರು ಅಲ್ಲಿಗೆ ಆಗಮಿಸಿದ್ದು, ಅದ್ಹೇಗೋ ಒಂಟೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಉದ್ರಿಕ್ತಗೊಂಡಿದ್ದ ಒಂಟೆಯನ್ನು ಸಮೀಪದ ಮರಕ್ಕೆ ಕಟ್ಟಿ ಹಾಕಿದ ಗ್ರಾಮದ ಜನ ಅದು ಸೌಮ್ಯವಾಗುತ್ತಿದ್ದಂತೆ, ಅದಕ್ಕೆ ಥಳಿಸಲು ಆರಂಭಿಸಿದ್ದಾರೆ. ಪರಿಣಾಮ ಅದು ಸಾವನ್ನಪ್ಪಿದೆ. ಇತ್ತ ಗ್ರಾಮಸ್ಥರು ಒಂಟೆಯನ್ನು ಥಳಿಸಿ ಸಾಯಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ.

You may also like

Leave a Comment