Home » Chikkamagaluru: ಚಿಕ್ಕಮಗಳೂರು: ಆನ್‌ಲೈನ್ ಬುಕ್ಕಿಂಗ್ ಆರಂಭ: ದಿನಕ್ಕೆ 156 ಜನರಿಗೆ ಅವಕಾಶ

Chikkamagaluru: ಚಿಕ್ಕಮಗಳೂರು: ಆನ್‌ಲೈನ್ ಬುಕ್ಕಿಂಗ್ ಆರಂಭ: ದಿನಕ್ಕೆ 156 ಜನರಿಗೆ ಅವಕಾಶ

0 comments
Chikkamagaluru tourist Spots

Chikkamagaluru: ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಪ್ರಯುಕ್ತ ಬರುವ ಪ್ರವಾಸಿಗರಿಗೆ ಮುಳ್ಳಯ್ಯನಗಿರಿ ಸೇರಿ ಜಿಲ್ಲೆಯ ಪ್ರಕೃತಿಯ ಸೊಬಗನ್ನು ವೈಮಾನಿಕ ನೋಟದ ಮೂಲಕ ಪರಿಚಯಿಸಲು ತುಂಭಿ ಏವಿಯೇಷನ್ ಮತ್ತು ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಜಿಲ್ಲಾಡಳಿತ ಮುಂದಾಗಿದ್ದು, 18 ದಿನಗಳ ಹೆಲಿ ಟೂರಿಸಂ (ಹೆಲಿಕಾಪ್ಟರ್ ಪ್ರವಾಸ) ಆರಂಭಿಸಿದೆ.

ಆನ್‌ಲೈನ್ ಬುಕ್ಕಿಂಗ್ ಆರಂಭವಾಗಿದ್ದು, ಪ್ರತಿದಿನ 156 ಜನರಿಗೆ ಮಾತ್ರ ಅವಕಾಶ ದೊರಕಲಿದೆ.ಡಿ.20ರಿಂದ ಹೆಲಿ ಟೂರಿಸಂ ಆರಂಭವಾಗಲಿದೆ. ಮೊದಲ ದಿನ ಮೂಡಿಗೆರೆ, ಡಿ.21 ಮತ್ತು 22ರಂದು ಚಿಕ್ಕಮಗಳೂರು, 23ರಂದು ಮೂಡಿಗೆರೆ, 24ರಂದು ಚಿಕ್ಕಮಗಳೂರು, 25 ರಂದು ಕಳಸ, 26ರಿಂದ ಜ.6ರವರೆಗೆ ಚಿಕ್ಕಮಗಳೂರಿನಲ್ಲಿ ಹೆಲಿ ಟೂರಿಸಂ ನಡೆಯಲಿದೆ.

ಮೂರು ಕಡೆ ಹೆಲಿಪ್ಯಾಡ್‌ಗಳು ನಿರ್ಮಾಣವಾಗಿವೆ.ಕರ್ನಾಟಕದ ಅತಿ ಎತ್ತರದ ಶಿಖರ ಮುಳ್ಳಯ್ಯನಗಿರಿಯ ವೈಮಾನಿಕ ನೋಟ, ಸುತ್ತಮುತ್ತಲಿನ ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಗಳು, ಬಾಬಾ ಬುಡನ್‌ಗಿರಿ ಬೆಟ್ಟಗಳು, ಕಾಫಿ ತೋಟಗಳು, ಕಣಿವೆಗಳು ಮತ್ತು ಚಿಕ್ಕಮಗಳೂರಿನ ಸುತ್ತಮುತ್ತಲಿನ ಕೆರೆಗಳ ರಮಣೀಯ ನೋಟಗಳನ್ನು ಕಣ್ತುಂಬಿಕೊಳ್ಳಲು ಅವಕಾಶ ಇದೆ.ಮೂಡಿಗೆರೆ ಸೆಕ್ಟರ್‌ನಲ್ಲಿ ಸುತ್ತಮುತ್ತಲ ಕಾಫಿ ತೋಟಗಳು, ಅರಣ್ಯ, ಕಣಿವೆಗಳು ಮತ್ತು ಗ್ರಾಮೀಣ ಜನಜೀವನದ ಪಕ್ಷಿನೋಟ, ಕುದುರೆಮುಖ ರಾಷ್ಟ್ರೀಯ ಉದ್ಯಾನ ಮತ್ತು ಬಾಬಾಬುಡನ್‌ಗಿರಿ ಪ್ರದೇಶದ ಕಡೆಗೆ ಸಂಪರ್ಕಿಸುವ ಶ್ರೇಣಿಗಳ ದೂರದ ನೋಟಗಳನ್ನು ವೀಕ್ಷಿಸಬಹುದು.

ಕಳಸ ಸೆಕ್ಟರ್‌ನಲ್ಲಿ ಕಳಸ ಪಟ್ಟಣ, ನದಿಗಳು, ಕಣಿವೆಗಳು, ಸುತ್ತಮುತ್ತಲಿನ ಬೆಟ್ಟಗಳು, ಕಳಸ-ಕುದುರೆಮುಖ ಪ್ರದೇಶದ ಜಲಪಾತಗಳು, ಪಶ್ಚಿಮ ಘಟ್ಟಗಳ ದೃಶ್ಯಗಳ ಪಕ್ಷಿನೋಟ ಪ್ರವಾಸಿಗರಿಗೆ ಲಭ್ಯವಾಗಲಿದೆ. ಹವಾಮಾನ ಮತ್ತು ವನ್ಯಜೀವಿಗಳನ್ನು ಗಮನದಲ್ಲಿ ಇರಿಸಿಕೊಂಡು ಜಿಲ್ಲಾಡಳಿತ ಅನುಮತಿಸಿರುವ ಮಾರ್ಗದಲ್ಲಿ ಮಾತ್ರ ಹೆಲಿಕಾಪ್ಟರ್ ಹಾರಾಟ ನಡೆಯಲಿದೆ.

ಆನ್‌ಲೈನ್ ಬುಕ್ಕಿಂಗ್ ಆರಂಭವಾಗಿದ್ದು ಪ್ರತಿ ಪ್ರಯಾಣಿಕರಿಗೆ ₹4500 ಪ್ರಯಾಣ ದರ ನಿಗದಿ ಮಾಡಲಾಗಿದೆ. ಹೆಲಿಕಾಪ್ಟರ್‌ನಲ್ಲಿ 6 ನಿಮಿಷಗಳ ಕಾಲ ಹಾರಾಟ ಮಾಡಿಸಲಾಗುತ್ತದೆ. ಬೆಳಿಗೆ 9ರಿಂದ ಸಂಜೆ 4 ಗಂಟೆ ತನಕ ಅವಕಾಶ ಕಲ್ಪಿಸಲಾಗಿದ್ದು ದಿನಕ್ಕೆ ಗರಿಷ್ಠ 156 ಪ್ರಯಾಣಿಕರಿಗೆ ಮಾತ್ರ ಹೆಲಿಕಾಪ್ಟರ್‌ನಲ್ಲಿ ಹಾರಾಟಕ್ಕೆ ಅವಕಾಶ ದೊರಕಲಿದೆ. ಹಬ್ಬಗಳ ಸಂದರ್ಭದಲ್ಲಿ ಪ್ರವಾಸಿಗರನ್ನು ಆಕರ್ಷಿಸಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ನೀಡುವ ಉದ್ದೇಶದಿಂದ ಹೆಲಿ ಟೂರಿಸಂ ಆಯೋಜಿಸಲಾಗಿದೆ. ವೆಬ್‌ ಲಿಂಕ್ (https://helitaxii.com/bookwithus?tab=UACS) ಮೂಲಕ ಆನ್‌ಲೈನ್ ಬುಕ್ಕಿಂಗ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಸಮಿತಿಯ ನಾಗರಾಜ್ ಚಿಟ್ಟಿ (7892886875) ಅವರನ್ನು ಸಂಪರ್ಕಿಸಬಹುದು ಎಂದು ಎಂದು ಚಿಕ್ಕಮಗಳೂರು ಜಿಲ್ಲಾ ಪ್ರವಾಸೋದ್ಯಮ ಸಮಿತಿ (ಡಿಟಿಸಿ) ತಿಳಿಸಿದೆ.

You may also like