ಭಾರತ ಸರಕಾರ ಹಲವಾರು ಚೀನಿ ಆಪ್‌ಗಳನ್ನು ಈ ಹಿಂದೆ ನಿಷೇಧಿಸಿದ್ದು, ಈಗ ಚೀನಾ ಮೂಲದ ಇನ್ನೂರಕ್ಕೂ ಹೆಚ್ಚು ಲೋನ್ ಮತ್ತು ಬೆಟ್ಟಿಂಗ್ ಆಪ್‌ಗಳನ್ನು ನಿಷೇಧಿಸಲು ತುರ್ತು ಕ್ರಮ ವಹಿಸಿದೆ. ಇದರಲ್ಲಿ ಮುಖ್ಯವಾಗಿ 138 ಬೆಟ್ಟಿಂಗ್ ಆ್ಯಪ್ಗಳು ಮತ್ತು 94 ಲೋನ್ ಆ್ಯಪ್ಗಳು ಸೇರಿಕೊಂಡಿದೆ. ಈ ಸಂಬಂಧ ಗೃಹ ಸಚಿವಾಲಯದಿಂದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯಕ್ಕೆ ಸೂಚನೆ ನೀಡಲಾಗಿದೆ.
ಈ ಆ್ಯಪ್ಗಳ ಮೂಲಕ ಗೂಢಚಾರಿಕೆ, ಪಿತೂರಿ ಇತ್ಯಾದಿ ಪಾತಕಗಳನ್ನು ಎಸಗುವುದರ ಜೊತೆಗೆ ಜನರ ವೈಯಕ್ತಿಕ ಮಾಹಿತಿಯನ್ನು ಕದ್ದು ಭದ್ರತಾ ಅಪಾಯ ಒಡ್ಡುವಂತೆ ತೋರಿದೆ. ಹೀಗಾಗಿ, ಈ ಅಪ್ಲಿಕೇಶನ್ಗಳನ್ನು ನಿಷೇಧಿಸಲು ಸರ್ಕಾರ ತ್ವರಿತ ಕ್ರಮಕ್ಕೆ ಮುಂದಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಆನ್ಲೈನ್ ಜಾಹೀರಾತು ಒದಗಿಸುವ ಮಧ್ಯವರ್ತಿಗಳಿಗೆ ಈ ಚೀನೀ ಲೋನ್ ಆ್ಯಪ್ ಮತ್ತು ಬೆಟ್ಟಿಂಗ್ ಆ್ಯಪ್ಗಳಿಗೆ ಅವಕಾಶ ನೀಡದಿರಿ ಎಂದು ಸರ್ಕಾರ ಸೂಚನೆ ನೀಡಿದೆ. ಬೆಟ್ಟಿಂಗ್ನಂತಹ ಜೂಜುಗಳ ಜಾಹೀರಾತುಗಳನ್ನು ಭಾರತದಲ್ಲಿ ನೀಡಬಾರದೆಂದು ಕಟ್ಟುನಿಟ್ಟಾಗಿ ತಿಳಿಸಲಾಗಿದೆ ಎಂದು ವರದಿ ಹೇಳುತ್ತಿದೆ.
ಸಾಲ ನೀಡುತ್ತೇವೆ ಎಂದು ಹೇಳಿ ವಂಚನೆ ಮಾಡುವ ಅನೇಕ ಆಪ್‌ಗಳ ವಿರುದ್ಧ ದೇಶಾದ್ಯಂತ ಅನೇಕ ದೂರುಗಳು ದಾಖಲಾಗಿದ್ದು, ಇವುಗಳು ಜನರನ್ನು ಬಣ್ಣದ ಮಾತಿನಿಂದ ಮೋಡಿ ಮಾಡಿ, ಸುಲಭವಾಗಿ ಸಾಲ ನೀಡುತ್ತೇವೆ ಎಂದು ಹೇಳಿ ವಂಚಿಸಿ ನಂತರ ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಸಂಗತಿಗಳು ಹೊರಬಿದ್ದಿದೆ. ಇಷ್ಟು ಮಾತ್ರವಲ್ಲದೇ, ಸಾಲ ನೀಡಿದ ಹಣಕ್ಕೆ ಅಧಿಕ ಬಡ್ಡಿ ವಿಧಿಸಿ ಲೆಕ್ಕವಿಲ್ಲದಷ್ಟು ಹಣ ವಸೂಲಿ ಕೂಡಾ ಮಾಡಿದ ಘಟನೆಗಳು ಕೂಡಾ ನಡೆದಿದೆ. ಉತ್ತರ ಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ ಮುಂತಾದ ರಾಜ್ಯಗಳು ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯದ ಗಮನಕ್ಕೆ ತಂದು ಎಚ್ಚರಿಸಿದ್ದವು. ಈ ಆ್ಯಪ್ಗಳ ಹಿಂದೆ ಚೀನೀ ನಾಗರಿಕರು ಇದ್ದು, ಭಾರತದ ಸ್ಥಳೀಯ ಕೆಲ ಜನರ ಸಹಾಯದಿಂದ ಈ ದಂಧೆ ನಡೆಸುತ್ತಿರುವುದು ತಿಳಿದುಬಂದಿದೆ.
ಭಾರತದ ಸಾರ್ವಭೌಮತೆಗೆ ಅಪಾಯ ಉಂಟು ಮಾಡುವ ಪ್ರಕರಣಗಳಿಗೆ ಸಂಬಂಧಿಸಿದ ಐಟಿ ಕಾಯ್ದೆಯ ಸೆಕ್ಷನ್ 69 ಅಡಿಯಲ್ಲಿ ಈ ಆ್ಯಪ್ಗಳ ವಿರುದ್ಧ ಸರ್ಕಾರ ಕ್ರಮ ಜರುಗಿಸುತ್ತಿದೆ. ಬಹುತೇಕ ಅಪ್ಲಿಕೇಶನ್‌ಗಳು ಪ್ಲೇಸ್ಟೋರ್‌ನಲ್ಲಿ ಲಭ್ಯವಿದ್ದು, ಬೆಟ್ಟಿಂಗ್ ಆಪ್‌ಗಳು ಜನರ ದೌರ್ಬಲ್ಯವನ್ನು ದುರ್ಬಳಕೆ ಮಾಡಿಕೊಂಡು ಹಣ ಲೂಟಿ ಮಾಡತ್ತಿದೆ ಎನ್ನಲಾಗಿದೆ.
