Davanagere family death news: ನಿನ್ನೆ ದಾವಣಗೆರೆ ಮೂಲದ ಇಂಜಿನಿಯರ್ ಕುಟುಂಬವೊಂದು ಅಮೆರಿಕಾದಲ್ಲಿ ಇದ್ದಕ್ಕಿದ್ದಂತೆ ಸಾವಿಗೀಡಾದ ಘಟನೆಯೊಂದು (Davanagere family death news) ನಡೆದಿತ್ತು. ಈ ಸಾವಿನ ಕುರಿತು ತನಿಖೆ ನಡೆಸಬೇಕೆಂದು ಮೃತರ ಕುಟುಂಬಸ್ಥರು ಕೇಳಿಕೊಂಡಿದ್ದರು. ಚೆನ್ನಾಗಿಯೇ ಇದ್ದ ಕುಟುಂಬ, ಗಂಡ ಹೆಂಡತಿ ಇಬ್ಬರೂ ಇಂಜಿನಿಯರ್ಸ್, ಇವರಿಬ್ಬರಿಗೆ ಆರು ವರ್ಷದ ಓರ್ವ ಮಗ. ಎಲ್ಲವೂ ಚೆನ್ನಾಗಿತ್ತು ಎಂದು ಕುಟುಂಬಸ್ಥರ ಮಾತು. ಆದರೆ ಬರಸಿಡಿಲಿನಂತೆ ಬಂತು ಈ ಕುಟುಂಬದ ಸಾವಿನ ವಾರ್ತೆ. ಇದೀಗ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ಅದರಲ್ಲಿ ಮೂವರ ತಲೆಯಲ್ಲಿಯೂ ಬಂದೂಕಿನ ಬುಲೆಟ್ ಇರುವುದು ಪತ್ತೆಯಾಗಿದೆ.
ಮದುವೆಯಾಗಿ 9 ವರ್ಷದಿಂದ ಅಮೆರಿಕಾದ ಬಾಲ್ಟಿಮೋರ್‌ನಲ್ಲಿ ಈ ಕುಟುಂಬ ವಾಸವಾಗಿತ್ತು. ಇದೀಗ ಮೂವರ ಸಾವಿನ ಕುರಿತು ಅಮೆರಿಕಾ ಪೊಲೀಸರು ಪರಿಶೀಲನೆ ನಡೆಸಿದ್ದು, ಮೂವರ ತಲೆಯಲ್ಲಿಯೂ ಗುಂಡುಗಳು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಶೋಧಕಾರ್ಯದ ಪ್ರಕಾರ, ಮನೆಯ ಒಡೆಯನಾಗಿದ್ದ ಯೋಗೇಶ್ ಸ್ವತಃ ತನ್ನ ಹೆಂಡತಿ ಮತ್ತು ಮಗುವಿನ ತಲೆಗೆ ಗುಂಡು ಹೊಡೆದಿದ್ದಾನೆ, ನಂತರ ತನ್ನ ತಲೆಗೂ ಗುಂಡು ಹೊಡೆದಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಯೋಗೇಶ್ ಹೊನ್ನಾಳ (37), ಪ್ರತಿಭಾ ಹೊನ್ನಾಳ್ (35), ಯಶ್ ಹೊನ್ನಾಳ್ (6) ಮೃತಪಟ್ಟವರು. ಮೂವರ ಸಾವು ಹಿನ್ನಲೆಯಲ್ಲಿ ಪೊಲೀಸರಿಗೆ ಮೃತ ಯೋಗೇಶ್ ಮನೆಯಲ್ಲಿ ಡೆತ್‌ನೋಟ್ ಪತ್ತೆಯಾಗಿದೆ. ಆದರೆ ಡೆತ್‌ನೋಟ್‌ನಲ್ಲಿ ಏನಿದೆ ಎಂಬ ಮಾಹಿತಿಯನ್ನು ಗೌಪ್ಯವಾಗಿಡಲಾಗಿದೆ. ಪೊಲೀಸರ ತನಿಖೆ ಮುಂದುವರಿದಿದ್ದು, ಕೆಲದಿನದಲ್ಲಿ ಮೃತದೇಹ ಕುಟುಂಬಸ್ಥರಿಗೆ ಒಪ್ಪಿಸುವ ಸಾಧ್ಯತೆಯಿದೆ. ಆ.15 ರಂದು ಈ ಘಟನೆ ನಡೆದಿದೆ. ಆ.18 ರಂದು ಈ ಮಾಹಿತಿ ಬಹಿರಂಗಗೊಂಡಿದೆ.
