Delhi Murder: ನಿನ್ನೆ ಇಡೀ ದೇಶವೇ ಬೆಚ್ಚಿಬೀಳಿಸುವಂತಹ ಒಂದು ಬರ್ಬರ ಹತ್ಯೆಯೊಂದು ದೆಹಲಿಯಲ್ಲಿ (Delhi murder) ನಡೆದಿತ್ತು. 16 ವರ್ಷದ ಓರ್ವ ಹದಿಹರೆಯದ ಯುವತಿಯನ್ನು ಆಕೆಯ ಪ್ರಿಯಕರ ಮನಬಂದಂತೆ ಮನಸೋ ಇಚ್ಛೆ ಚಾಕುವಿನಿಂದ ಇಪ್ಪತ್ತಕ್ಕೂ ಹೆಚ್ಚು ಬಾರಿ ಇರಿದು ಆಕೆಯ ಮೇಲೆ ಕಲ್ಲೊಂದನ್ನು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ನಡೆದಿತ್ತು. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಇದೀಗ ಈ ಪೈಶಾಚಿಕ ಕೃತ್ಯ ಮೆರೆದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಈತ ಸೆರೆ ಸಿಕ್ಕಿರುವ ಮಾಹಿತಿಯನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದ್ದಾರೆ. ಈತ ಈ ಘಟನೆ ನಡೆದ ನಂತರ ತನ್ನ ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ಪರಾರಿಯಾಗಿದ್ದ.
ಈ ಭೀಭತ್ಸ್ಯ ಕೃತ್ಯ ಎಸಗಿದ ಆರೋಪಿ ಸಾಹಿಲ್ ಬುಲಂದ್‌ಶಹರ್‌ನಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ಅಡಗಿ ಕುಳಿತಿದ್ದ, ನಂತರ ಅಲ್ಲಿಂದ ತನ್ನ ತಂದೆಗೆ ಕರೆ ಮಾಡಿದ್ದ. ಆತನ ಈ ಒಂದು ಕರೆಯಿಂದಲೇ ಪೊಲೀಸರು ಬಂಧಿಸಿದ್ದಾರೆ. ಹತ್ಯೆಗೀಡಾದ ಯುವತಿಯು ಆರೋಪಿಯ ಜೊತೆ ಲಿವ್‌ಇನ್ ರಿಲೇಷನ್‌ಶಿಪ್‌ನಲ್ಲಿದ್ದಳು ಎನ್ನಲಾಗಿದೆ. ಈಕೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಈಕೆಯನ್ನು ಅಡ್ಡಗಟ್ಟಿದ್ದ ದುಷ್ಕರ್ಮಿ ಹಲವು ಬಾರಿ ಆಕೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ. ಮೃತ ಯುವತಿ ಶಹಬಾದ್ ಡೈರಿ ಪ್ರದೇಶದ ಜೆಜೆ ಕಾಲೋನಿಯ ನಿವಾಸಿ ಎಂದು ವರದಿಯಾಗಿದೆ.

Image source: ವಿಜಯಕರ್ನಾಟಕ
ಇವರಿಬ್ಬರ ನಡುವೆ ನಡೆದ ಗಲಾಟೆಯೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಮೃತ ಯುವತಿಯ ತಂದೆ ನೀಡಿದ ದೂರಿನನ್ವಯ ಐಪಿಸಿ ಸೆಕ್ಷನ್ 302ರಡಿ ಪ್ರಕರಣ ದಾಖಲಾಗಿದೆ. ಮರಣೋತ್ತರ ವರದಿ ಇನ್ನಷ್ಟೇ ಬರಲಿದೆ.
ವರದಿಯ ಪ್ರಕಾರ, ಸಾಹಿಲ್ ಮತ್ತು ಬಾಲಕಿ ಕಳೆದ ಮೂರು ವರ್ಷದಿಂದ ಸ್ನೇಹಿತರಾಗಿದ್ದು, ಆದರೆ ಇತ್ತೀಚೆಗೆ ಆಕೆ ಸಾಹಿಲ್‌ನಿಂದ ದೂರ ಇರಲು ಪ್ರಯತ್ನ ಪಡುತ್ತಿದ್ದಳು ಎನ್ನಲಾಗಿದೆ. ಆಕೆಯ ಕೈಯಲ್ಲಿ ಪ್ರವೀಣ್ ಎನ್ನುವ ಹಚ್ಚೆ ಇತ್ತು ಎಂದು ಹೇಳಲಾಗುತ್ತಿದೆ. ವೀಡಿಯೋ ಪ್ರಕಾರ, ಈ ಘಟನೆ ನಡೆಯುವಾಗ ಹತ್ತಿರದಲ್ಲಿ ಹಲವಾರು ಮಂದಿ ಓಡಾಡುತ್ತಿದ್ದರೂ ಯಾರೂ ಕೂಡಾ ಈ ಘಟನೆಯನ್ನು ತಡೆಯುವ ಒಂದು ಚೂರು ಪ್ರಯತ್ನ ಮಾಡಿಲ್ಲ.
