Delhi News: ಸಾಮಾನ್ಯವಾಗಿ ಮನೆಗೆ ಕಳ್ಳರು (thief) ನುಗ್ಗಿದ್ದಾಗ ಒಂದು ವಸ್ತುವನ್ನೂ ಬಿಡದಂತೆ ಎಲ್ಲವನ್ನೂ ದೋಚಿಕೊಂಡು ಹೋಗುತ್ತಾರೆ. ಆದರೆ, ನೀವು ಎಲ್ಲಾದರೂ ಕಳ್ಳತನ (theft) ಮಾಡಲು ಬಂದ ಕಳ್ಳರು ಕದಿಯುವ ಬದಲು ತಾವೇ ಹಣ ನೀಡಿರುವುದನ್ನು ನೋಡಿದ್ದೀರಾ ? ಬಹುಶಃ ಈ ಕಳ್ಳರು ತುಂಬಾ ಕರುಣೆಯುಳ್ಳವರು ಇರಬೇಕು. ಹೌದು, ಕಳ್ಳತನಕ್ಕೆ ಹೋದ ಖದೀಮರು ಮನೆಯ ಪರಿಸ್ಥಿತಿ ನೋಡಿ ಬೇಸರಗೊಂಡು ತಾವೇ 500 ರೂ. ನೋಟು ಇಟ್ಟು ಬಂದಿರುವ ಘಟನೆ ದಿಲ್ಲಿಯ (Delhi) ಮನೆಯೊಂದರಲ್ಲಿ ನಡೆದಿದೆ.
ಈ ಘಟನೆ ದಿಲ್ಲಿಯ ನಿವೃತ್ತ ಇಂಜಿನಿಯರ್ ಎಂ ರಾಮಕೃಷ್ಣ ಎಂಬುವವರ ಮನೆಯಲ್ಲಿ ನಡೆದಿದೆ. ರಾಮಕೃಷ್ಣ ಅವರು ಜುಲೈ 19 ರ ಸಂಜೆ ತಮ್ಮ ಪತ್ನಿಯೊಂದಿಗೆ ತಮ್ಮ ಮಗನನ್ನು ನೋಡಲು ಗುರುಗ್ರಾಮಕ್ಕೆ ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಕಳ್ಳರು ಮನೆಯ ಮುಖ್ಯ ಗೇಟ್‌ನ ಬೀಗ ಒಡೆದು ಇವರ ಮನೆಗೆ ನುಗ್ಗಿದ್ದಾರೆ.
ರಾಮಕೃಷ್ಣ ಅವರ ಮನೆಯೊಳಗೆ ಯಾವುದೇ ಬೆಲೆ ಬಾಳುವ ವಸ್ತುಗಳನ್ನು ಇಟ್ಟಿರಲಿಲ್ಲ. ಹಾಗಾಗಿ ಮನೆಯಿಂದ ಯಾವುದೇ ವಸ್ತು ಕದ್ದಿಲ್ಲ ಎಂದು ಹೇಳಲಾಗಿದೆ. ಆದರೆ, ಮುಖ್ಯ ಗೇಟ್ ಬಳಿ 500 ರೂ. ಬಿದ್ದಿರುವುದು ಕಂಡುಬಂದಿದೆ. ಬೆಳಗ್ಗೆ ಪಕ್ಕದ ಮನೆಯವರು ರಾಮಕೃಷ್ಣ ಅವರ ಮನೆಯಲ್ಲಿ ಕಳ್ಳತನವಾಗಿದೆ ಎಂದು ಫೋನ್ ಮಾಡಿ ಹೇಳಿದರು. ಮಾಹಿತಿ ತಿಳಿದ ತಕ್ಷಣ ಮಾಲೀಕರು ಮನೆಗೆ ಧಾವಿಸಿದ್ದು, ನಂತರ ಪೊಲೀಸರಿಗೆ ದೂರು ನೀಡಿದ್ದಾರೆ.
ಎಂ ರಾಮಕೃಷ್ಣ ಅವರು ನೀಡಿದ ದೂರಿನ ಅನ್ವಯ ಪೊಲೀಸರು ವಿವಿಧ ಐಪಿಸಿ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ. ಆದರೆ, ಕಳ್ಳತನ ಮಾಡಲು ಮನೆಗೆ ಬಂದ ಕಳ್ಳರು ಯಾವುದೇ ವಸ್ತು ಕಳವು ಮಾಡದೆ ತಮ್ಮದೇ ಐನೂರು ರೂಪಾಯಿಯನ್ನು ಇಟ್ಟು ಹೋಗಿರುವುದು ಆಶ್ಚರ್ಯವೇ ಸರಿ!!.
