Home » ನಾಯಿ ಮರಿಯ ದಾಹ ತೀರಿಸಲು ತನ್ನ ಬೆವರಿಳಿಸಿದ ಪುಟ್ಟ ಬಾಲಕ !! | ಪುಟ್ಟ ವಯಸ್ಸಿನ ದೊಡ್ಡ ಮನಸ್ಸಿನ ಈತನ ಸಹಾಯಹಸ್ತ ಮನ ಮೆಚ್ಚುವಂತಿದೆ


ನಾಯಿ ಮರಿಯ ದಾಹ ತೀರಿಸಲು ತನ್ನ ಬೆವರಿಳಿಸಿದ ಪುಟ್ಟ ಬಾಲಕ !! | ಪುಟ್ಟ ವಯಸ್ಸಿನ ದೊಡ್ಡ ಮನಸ್ಸಿನ ಈತನ ಸಹಾಯಹಸ್ತ ಮನ ಮೆಚ್ಚುವಂತಿದೆ

by ಹೊಸಕನ್ನಡ
0 comments

ಮಕ್ಕಳು ದೇವರ ಸ್ವರೂಪ. ಮಕ್ಕಳಿಗೆ ಒಳ್ಳೆಯದು-ಕೆಟ್ಟದ್ದು, ಸರಿ ತಪ್ಪುಗಳ ಕಲ್ಪನೆಯೇ ಇರುವುದಿಲ್ಲ. ಅವರದ್ದು ನಿಷ್ಕಲ್ಮಶ ಪ್ರೀತಿ. ಆ ಮುಗ್ದ ಪ್ರೀತಿಗೆ ಎಂಥವರು ಕೂಡಾ ಮನಸೋಲಲೇ ಬೇಕು. ಸಂತೋಷವಾದಾಗ ಕೇಕೆ ಹಾಕಿ ನಗುತ್ತದೆ, ಕಷ್ಟದಲ್ಲಿರುವವರನ್ನು ಕಂಡರಂತೂ ಆ ಮುಗ್ದ ಮನಸ್ಸು ಮರುಗಿ ಬಿಡುತ್ತದೆ. ಇಂಥಹ ನಿಷ್ಕಲ್ಮಶ ಮನಸ್ಸಿನ ವೀಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.

ಪ್ರಾಣಿಗಳು ಮತ್ತು ಮಕ್ಕಳ ವೀಡಿಯೋಗಳು ಪ್ರತಿ ಬಾರಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ನಾಯಿಗಾಗಿ ಪುಟ್ಟ ಬಾಲಕ ಅನುಕಂಪ ತೋರುವ ವೀಡಿಯೋ ಸಾವಿರಾರು ಸಾಮಾಜಿಕ ಮಾಧ್ಯಮ ಬಳಕೆದಾರರ ಮನಸನ್ನು ಗೆದ್ದಿದೆ. ವೈರಲ್ ಆದ ಈ ವೀಡಿಯೋದಲ್ಲಿ ಬಾಯಾರಿಕೆಯಿಂದ ಬಳಲುತ್ತಿದ್ದ ನಾಯಿ ಮರಿಯೊಂದು ಆಹಾರ, ನೀರಿಗಾಗಿ ರಸ್ತೆಯಲ್ಲೆಲ್ಲ ಓಡಾಡುತ್ತಿತ್ತು. ಅದನ್ನು ಕಂಡ ಚಿಕ್ಕ ಬಾಲಕನೊಬ್ಬ ಆ ನಾಯಿಮರಿಯನ್ನು ಎತ್ತಿಕೊಂಡು ಹೋಗಿ, ಬೋರ್​ವೆಲ್​ ಪಂಪ್ ಹೊಡೆದು, ನೀರು ಕುಡಿಸಿದ್ದಾನೆ. ಪುಟ್ಟ ಮಗುವೊಂದು ನಾಯಿಯ ಬಾಯಾರಿಕೆಯನ್ನು ನೀಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದೆ.

ನಾಯಿಯ ದಾಹ ತಣಿಸಲು ಮಗು ತನ್ನೆಲ್ಲಾ ಶಕ್ತಿಯನ್ನು ಉಪಯೋಗಿಸುವುದನ್ನು ಇಲ್ಲಿ ನೋಡಬಹುದು.
ಮಗುವಿನ ಪರಿಶ್ರಮದ ಈ ವೀಡಿಯೋ ಎಲ್ಲರ ಮನ ಗೆದ್ದಿದೆ. ಈ ವೀಡಿಯೋ ನೋಡಿದರೆ ಎಂಥವರೂ ಸಂತೋಷ ಪಡಬೇಕು. ಆ ಸಹೃದಯಿ ಬಾಲಕನ ಕೆಲಸಕ್ಕೆ ಬೆನ್ನು ತಟ್ಟಬೇಕು.

ಈ ವೀಡಿಯೋವನ್ನು ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಕಡ್ ಕಿತ್ನಾ ಹಿ ಛೋಟಾ ಹೋ, ಹರ್ ಕೋಯಿ ಕಿಸಿ ಕಿ ಯಥಾಸಂಭವ ಹೆಲ್ಪ್ ಕರ್ ಸಕ್ತಾ ಹೈ (ನಾವು ಎಷ್ಟೇ ಚಿಕ್ಕವರಾಗಿದ್ದರೂ, ಯಾರಾದರೂ, ಯಾರಿಗಾದರೂ ಸಾಧ್ಯವಾದಷ್ಟು ಸಹಾಯ ಮಾಡಬಹುದು). ದೇವರು ನಿನ್ನನ್ನು ಆಶೀರ್ವದಿಸಲಿ ಎಂದು ಟ್ವೀಟ್ ಮಾಡಿದ್ದಾರೆ.

14 ಸೆಕೆಂಡುಗಳ ಈ ವೀಡಿಯೋ ಕ್ಲಿಪ್ ನೆಟ್ಟಿಗರ ಹೃದಯವನ್ನು ಕದ್ದಿದೆ. ಈ ವಿಡಿಯೋವನ್ನು 22,000ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.

ಈ ವೀಡಿಯೋವನ್ನು ನೋಡಿದ ನೆಟ್ಟಿಗರೊಬ್ಬರು “ಇಡೀ ಜಗತ್ತು ಹೀಗಿರಬೇಕು ಎಂದು ನಾನು ಬಯಸುತ್ತೇನೆ” ಎಂದು ಹೇಳಿದ್ದಾರೆ. ಮಾನವೀಯತೆಗೆ ವಯಸ್ಸು, ಎತ್ತರ, ಅಡ್ಡಬರುವುದಿಲ್ಲ ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ. ಮಕ್ಕಳಿಗೆ ಪ್ರಾಣಿ, ಪಕ್ಷಿಗಳ ಬಗ್ಗೆ ಕಾಳಜಿ, ಪ್ರೀತಿ ಮೂಡಿಸಿದರೆ ಅದರಿಂದ ಸಾಕಷ್ಟು ಪ್ರಯೋಜನಗಳಿವೆ ಎಂದು ಮತ್ತೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

You may also like

Leave a Comment