Railway : ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ಕರಾವಳಿ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಿಸಲು ಇದ್ದ ಅಡ್ಡಿ ನಿವಾರಣೆಯಾಗಿದೆ. ಅಂದರೆ ಈ ರೈಲ್ವೇಯಲ್ಲಿ ಘಾಟಿ ವಿಭಾಗದ ವಿದ್ಯುದೀಕರಣ ಪೂರ್ಣಗೊಂಡಿದೆ. ವಿದ್ಯುತ್ ಲೋಕೊಮೋಟಿವ್ ಪ್ರಯೋಗಾತ್ಮಕ ಚಾಲನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಇದು ರೈಲ್ವೇ ಮೂಲಸೌಕರ್ಯವನ್ನು ಬಲಪಡಿಸುವ ಮಹತ್ವದ ಮೈಲುಗಲ್ಲು ಎಂದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ವಿದ್ಯುದೀಕರಣ ಕಾಮಗಾರಿ 2023ರ ಡಿಸೆಂಬರ್ 1ರಂದು ಆರಂಭಗೊಂಡಿತ್ತು. ರೂ. 93.55 ಕೋಟಿ ವೆಚ್ಚದ ಕಾಮಗಾರಿ ಇದಾಗಿತ್ತು. 55 ಕಿ.ಮೀ. ಸಕಲೇಶಪುರ-ಸುಬ್ರಮಣ್ಯ ರೋಡ್ ನಡುವಿನ ವಿದ್ಯುದೀಕರಣ ಕಾಮಗಾರಿ ಅಷ್ಟು ಸುಲಭವಾಗಿರಲಿಲ್ಲ. . ಅಂದಹಾಗೆ ಘಾಟಿ ವಿಭಾಗವು ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್ ನಡುವಿನ 55 ಕಿ.ಮೀ. ಉದ್ದದ ಮಾರ್ಗವನ್ನು ಒಳಗೊಂಡಿದ್ದು, ಇದು ಭಾರತೀಯ ರೈಲ್ವೇಯ ಅತ್ಯಂತ ತಾಂತ್ರಿಕ ಸವಾಲಿನ ವಿಭಾಗಗಳಲ್ಲಿ ಒಂದಾಗಿದೆ. ಈ ಮಾರ್ಗದಲ್ಲಿ 1ಕ್ಕೆ 50ರಷ್ಟು ಗ್ರೇಡಿಯಂಟ್, 57 ಸುರಂಗಗಳು, 258 ಸೇತುವೆಗಳು, 108 ತೀಕ್ಷ್ಣ ತಿರುವುಗಳು ಇರುವುದರ ಜತೆಗೆ ಭೂಕುಸಿತಗಳಿಗೆ ಹೆಚ್ಚು ಒಳಪಡುವ ಪ್ರದೇಶವಾಗಿರು ವುದರಿಂದ ವಿದ್ಯುದೀಕರಣ ಅತ್ಯಂತ ಸಂಕೀರ್ಣವಾಗಿತ್ತು.
ಸುರಂಗಗಳ ಲೈನ್ಡ್ ಹಾಗೂ ಅನ್ಲೈನ್ಡ್ ಭಾಗಗಳಿಗೆ ಸಂಬಂಧಿಸಿದಂತೆ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ರಾಕ್ ಮೆಕ್ಯಾನಿಕ್ಸ್ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಸವಿಸ್ತಾರವಾದ ಭೌಗೋಳಿಕ ಸಮೀಕ್ಷೆಗಳನ್ನು ನಡೆಸಲಾಗಿದೆ. ವಿದ್ಯುದೀಕರಣ ಕಾರ್ಯ ಮತ್ತು ವಿದ್ಯುತ್ ಲೋಕೊಮೋಟಿವ್ ಪ್ರಯೋಗಾ ತ್ಮಕ ಚಾಲನೆ ಯಶಸ್ವಿಯಾಗಿ ಪೂರ್ಣಗೊಂಡಿರು ವುದರಿಂದ ಸಂಪೂರ್ಣ ಘಾಟಿ ವಿಭಾಗವು ಈಗ ವಿದ್ಯುತ್ ಚಾಲನೆಗೆ ಸಿದ್ಧವಾಗಿದೆ. ಇದು ಸ್ವತ್ಛ, ಶಕ್ತಿಸಮರ್ಥ ಮತ್ತು ವೆಚ್ಚದ ದೃಷ್ಟಿಯಿಂದ ಪರಿಣಾಮಕಾರಿ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸುತ್ತದೆ.
ಈ ರೈಲು ಮಾರ್ಗವು ಇಂಧನ ಮುಕ್ತ ಮಾರ್ಗವಾಗುತ್ತಿದ್ದಂತೆ ಭವಿಷ್ಯದಲ್ಲಿ ವಂದೇ ಭಾರತ್ ರೈಲುಗಳ ಕಾರ್ಯಾಚರಣೆಗೆ ಇಲಾಖೆ ಉತ್ಸಾಹ ತೋರಿಸಲಿದೆ. ಈಗಾಗಲೇ ಬೆಂಗಳೂರು-ಮಡಗಾಂವ್ ಮಾರ್ಗವಾಗಿ ವಂದೇ ಭಾರತ್ ರೈಲು ಕಾರ್ಯಾಚರಣೆ ಪ್ರಸ್ತಾಪಿಸಲಾಗಿದೆ.
