Mangaluru : ಕೆಲವು ದಿನಗಳ ಹಿಂದೆ ಪ್ರಧಾನಿ ಮೋದಿಯವರು ಉಡುಪಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗುವ ಸಲುವಾಗಿ ಎಂಎಲ್ಸಿ ಪತ್ನಿಗೆ ನಕಲಿ ಹುದ್ದೆಯನ್ನು ಸೃಷ್ಟಿ ಮಾಡಿ ಅವಕಾಶವನ್ನು ಕಲ್ಪಿಸಲಾಗಿದೆ ಎಂಬ ಗಂಭೀರ ಆರೋಪವನ್ನು ಕೇಳಿಬಂದಿದೆ.
ಹೌದು, ಪ್ರಧಾನಿ ಮೋದಿಯವರನ್ನು ಸ್ವಾಗತಿಸುವ ಪ್ರಮುಖರ ಪಟ್ಟಿಯಲ್ಲಿ ಎಂಎಲ್ಸಿ ಕಿಶೋರ್ ಕುಮಾರ್ ಅವರ ಪತ್ನಿಗೆ ಪಕ್ಷದ ನಕಲಿ ಹುದ್ದೆ ಸೃಷ್ಟಿಸಿ ಅವಕಾಶ ಕಲ್ಪಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಬಿಜೆಪಿಯಿಂದ ಬಂಡಾಯ ಎದ್ದಿರುವ ಅರುಣ್ ಕುಮಾರ್ ಪುತ್ತಿಲ ಮತ್ತವರ ಪರಿವಾರವು ಸಾಮಾಜಿಕ ಜಾಲತಾಣಗಳ ತನ್ನ ಖಾತೆಯಲ್ಲಿ ಈ ಗಂಭೀರ ಆರೋಪವನ್ನು ಶೇರ್ ಮಾಡಿಕೊಂಡಿದೆ.
ಈ ಕುರಿತಾಗಿ’ ಕಿಶೋರ್ ಕುಮಾರ್ ತನ್ನ ಪತ್ನಿಯನ್ನು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿಸುವುದಕ್ಕಾಗಿ ಪಕ್ಷದ ಮಹಿಳಾ ಮೋರ್ಚಾದ ದ.ಕ.ಜಿಲ್ಲಾ ಉಪಾಧ್ಯಕ್ಷೆ ಎಂದು ಬಿಂಬಿಸಿದ್ದಾರೆ. ಆಕೆ ಮಹಿಳಾ ಮೋರ್ಚಾದ ಉಪಾಧ್ಯಕ್ಷೆಯೇ ಅಲ್ಲ. ಜನಪ್ರತಿನಿಧಿಗಳು ತಮ್ಮ ಸಿಕ್ಕ ಅವಕಾಶವನ್ನು ಕಾರ್ಯಕರ್ತರಿಗೆ ಕೊಡಬೇಕೇ ವಿನಃ ಹೆಂಡತಿಯರಿಗೆ ಅಲ್ಲ’ ಎಂದು ವ್ಯಂಗ್ಯವಾಡಿದೆ.
ಈಗಾಗಲೇ ಪ್ರಧಾನಿಯನ್ನು ಭೇಟಿ ಮಾಡಿದ ಎಂಎಲ್ಸಿ ಕಿಶೋರ್ ಕುಮಾರ್ ಅವರ ಪತ್ನಿಯ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದಕ್ಕೆ ಪ್ರತಿಯಾಗಿ ಪುತ್ತಿಲ ಪರಿವಾರವು ಎಂಎಲ್ಸಿ ಕಿಶೋರ್ ಕುಮಾರ್ ಮತ್ತು ಬಿಜೆಪಿ ಮುಖಂಡರು ಅಧಿಕಾರ ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿದೆ.
