Free Bus: ರಾಜ್ಯ ಸರ್ಕಾರ ತಾನು ಅಧಿಕಾರಕ್ಕೆ ಬರುವ ಹೊತ್ತಿನಲ್ಲಿ ಪಂಚ ಗ್ಯಾರಂಟಿಗಳನ್ನು ಘೋಷಿಸಿತ್ತು. ಇದರಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸುವಂತಹ ‘ಶಕ್ತಿ ಯೋಜನೆ’ ಕೂಡ ಒಂದು. ಈ ಯೋಜನೆ ಜಾರಿಯಾದ ಬಳಿಕ ಬಸ್ಸಿನಲ್ಲಿ ಮಹಿಳೆಯರೇ ಕಿಕ್ಕಿರಿದು ಸೇರಿರುತ್ತಾರೆ. ಪುರುಷರಿಗೆ ಕೂರಲು ಬಿಡಿ ನಿಲ್ಲಲು ಕೂಡ ಸ್ಥಳವಕಾಶ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಪುರುಷರಿಗೂ ಕೂಡ ಉಚಿತ ಪ್ರಯಾಣ ನೀಡಬೇಕೆಂದು ಹಲವರು ಆಗ್ರಹಿಸಿದ್ದರು. ಇದೀಗ ಈ ಕುರಿತಾಗಿ ಸರ್ಕಾರ ಸದ್ಯದಲ್ಲೇ ಶುಭ ಸುದ್ದಿ ಒಂದನ್ನು ನೀಡಲಿದೆ ಎನ್ನಲಾಗುತ್ತಿದೆ.
ಹೌದು, ರಾಜ್ಯ ಸರ್ಕಾರ ಪುರುಷರಿಗೂ ಕೂಡ ಉಚಿತ ಬಸ್ ಪ್ರಯಾಣವನ್ನು ಕಲ್ಪಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಆದರೆ ಎಲ್ಲಾ ಪುರುಷರಿಗೂ ಕೂಡ ಉಚಿತ ಬಸ್ ಪ್ರಯಾಣ ಇರುವುದಿಲ್ಲ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಡಯಾಲಿಸಿಸ್ ಗೆ ಒಳಗಾಗುತ್ತಿರುವ ರೋಗಿಗಳಿಗೆ ಫ್ರೀ ಬಸ್ ವ್ಯವಸ್ಥೆ ಮಾಡಲಾಗುವುದು ಎಂಬ ಸುದ್ದಿ ಬಂದಿದೆ.
ಅಂದಹಾಗೆ ಈ ಕುರಿತಾಗಿ ವಿಧಾನಸಭಾಧ್ಯಕ್ಷ ಯುಟಿ ಖಾದರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ. ಇದೀಗ ಇದನ್ನು ಸಿಎಂ ಪುರಸ್ಕರಿಸಿದರೆ ಇನ್ನು ಮುಂದೆ ಡಯಾಲಿಸಿಸ್ ಚಿಕಿತ್ಸೆಗೊಳಗಾಗುತ್ತಿರುವ ಪುರುಷರಿಗೂ ಉಚಿತ ಬಸ್ ಪ್ರಯಾಣ ವ್ಯವಸ್ಥೆ ಸಿಗಲಿದೆ.
ಸಿಎಂಗೆ ಯುಟಿ ಖಾದರ್ ಪತ್ರ!
ʼರಾಜ್ಯದಲ್ಲಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಪುರುಷರು ಡಯಾಲಿಸಿಸ್‌ಗಾಗಿ ವಾರಕ್ಕೊಮ್ಮೆ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಿಗೆ ಹೋಗಬೇಕಿದೆ. ಹೀಗಾಗಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಪುರುಷರಿಗೂ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕುʼ ಅಂತಾ ಸಿಎಂಗೆ ಯು.ಟಿ.ಖಾದರ್ ಪತ್ರ ಬರೆದಿದ್ದಾರೆ. ಸ್ಪೀಕರ್ ಖಾದರ್ ಅವರ ಈ ನಡೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
