ಪ್ರತಿ ದೇಶವು ರಕ್ಷಣೆಯ ವಿಷಯದಲ್ಲಿ ವಿಶೇಷ ಗಮನ ವಹಿಸುತ್ತದೆ. ಶತ್ರು ಪಾಳಯದವರು ಆಕ್ರಮಣ ಮಾಡಿದ್ದಲ್ಲಿ ಶಸ್ತ್ರಾಸ್ತ್ರ ಯುದ್ದ ಸಾಮಗ್ರಿಗಳು ರಕ್ಷಣೆಗೆ ಅತ್ಯವಶ್ಯಕ. ಇದೀಗ, ಇರಾನ್ ತನ್ನ ಮೊಟ್ಟ ಮೊದಲ ಭೂಗತ ವಾಯುಪಡೆಯ ನೆಲೆಯನ್ನು ಅನಾವರಣ ಮಾಡಿದೆ. ಇದು ದೀರ್ಘ-ಶ್ರೇಣಿಯ ಕ್ರೂಸ್ ಕ್ಷಿಪಣಿಗಳೊಂದಿಗೆ ಶಸ್ತ್ರಸಜ್ಜಿತವಾದ, ಯುದ್ಧವಿಮಾನಗಳನ್ನು ಸಂಗ್ರಹಣೆ ಮಾಡುವ ಸಾಮರ್ಥ್ಯ ಹೊಂದಿದೆ.
ಈ ಭೂಗತ ವಾಯುಪಡೆ ನೆಲೆಗೆ “ಓಘಾಬ್ 44” (ಈಗಲ್44) ಎಂದು ನಾಮಕರಣ ಮಾಡಲಾಗಿದ್ದು, ಡ್ರೋನ್ಗಳ ಜೊತೆಗೆ ಎಲ್ಲಾ ರೀತಿಯ ಫೈಟರ್ ಜೆಟ್ಗಳು ಮತ್ತು ಬಾಂಬರ್ಗಳಿಗೆ ಈ ಭೂಗತ ನೆಲೆಯಲ್ಲಿ ಅವಕಾಶ ನೀಡಿದೆ ಎನ್ನಲಾಗಿದೆ. ಈ ಭೂಗತ ವಾಯುನೆಲೆಯಲ್ಲಿರುವ ಯುದ್ಧ ವಿಮಾನಗಳು, 1979ರ ಕ್ರಾಂತಿ ನಡೆದ ಸಂದರ್ಭದಲ್ಲಿ ವಶಪಡಿಸಿಕೊಂಡ ಅಮೆರಿಕದ ಯುದ್ಧ ವಿಮಾನಗಳೆಂದು ಹೇಳಲಾಗುತ್ತಿದೆ. ಈ ಯುದ್ಧ ವಿಮಾನಗಳನ್ನು ಆಗಿನ ಶಾ ಸರ್ಕಾರ ಅಮೆರಿಕದಿಂದ ಖರೀದಿ ಮಾಡಿದ್ದು, ಕ್ರಾಂತಿಯ ಬಳಿಕ ಇವು ಖಮೇನಿ ಸರ್ಕಾರದ ಭಾಗವಾಗಿ ಬಿಟ್ಟಿತ್ತು ಎನ್ನಲಾಗಿದೆ. ಆದರೆ ಈ ಭೂಗತ ವಾಯುಪಡೆ ನೆಲೆಯ ನಿಖರ ನೆಲೆಯ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿಲ್ಲ ಎನ್ನಲಾಗಿದೆ.
ಓಘಾಬ್ 44″ ಭೂಗತ ವಾಯಪಡೆ “ಪರ್ವತಗಳ ಅಡಿಯಲ್ಲಿ ನೂರಾರು ಮೀಟರ್ ಆಳದಲ್ಲಿ ನೆಲೆ ಹೊಂದಿದೆ”ಎಂದು INRA ಮಾಹಿತಿ ನೀಡಿದ್ದು, ವಾಯುನೆಲೆಯಲ್ಲಿನ ಜೆಟ್ಗಳು ದೀರ್ಘ-ಶ್ರೇಣಿಯ ಕ್ರೂಸ್ ಕ್ಷಿಪಣಿಗಳಿಂದ ಶಸ್ತ್ರಸಜ್ಜಿತವಾಗಿರುವುದನ್ನು ಕೂಡ ವರದಿಯಲ್ಲಿ ತಿಳಿಸಿದೆ.ವಾಯು ನೆಲೆಯ ಫೋಟೋಗಳು, ವಾಯುಪಡೆ ಸಿಬ್ಬಂದಿ ಮತ್ತು ಅಮೆರಿಕ ನಿರ್ಮಿತ F-4E ಫ್ಯಾಂಟಮ್ II ಫೈಟರ್ ಬಾಂಬರ್ಗಳ ಫೋಟೊವನ್ನು, ಅಧಿಕೃತ ಸುದ್ದಿ ಸಂಸ್ಥೆ IRNA ಬಿಡುಗಡೆ ಮಾಡಿದೆ.
ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ಜಂಟಿ ಸಮರಾಭ್ಯಾಸದಲ್ಲಿ, ಆಧುನಿಕ ಯುದ್ಧ ವಿಮಾನಗಳು, ನೌಕಾಪಡೆಯ ಹಡಗುಗಳು, ಫಿರಂಗಿ ವ್ಯವಸ್ಥೆಗಳ ಪ್ರದರ್ಶನ ನಡೆದಿದೆ. ಇದು ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಇರಾನ್ಗೆ ಎಚ್ಚರಿಕೆಯ ಸಂದೇಶವನ್ನು ಕಳುಹಿಸಲೆಂದೇ ನಡೆಸಲಾದ ಜಂಟಿ ಸಮರಾಭ್ಯಾಸ ಎನ್ನುವ ಊಹಾಪೋಹ ಹರಿದಾಡುತ್ತಿದೆ.ಶತ್ರುಗಳ ದಾಳಿ ನಡೆಸಿದ ವೇಳೆ ಹತ್ತಿರದ ಗುರಿಗಳನ್ನು ನಾಶಮಾಡುವ ನಿಟ್ಟಿನಲ್ಲಿ ಇಸ್ಲಾಮಿಕ್ ಗಣರಾಜ್ಯವಾದ ಇರಾನ್ ತನ್ನ ಹಳೆಯ ಯುದ್ಧ ವಿಮಾನಗಳನ್ನು ಉಪಯೋಗಿಸಲು ಯೋಜನೆ ಹಾಕಿಕೊಂಡಿದೆ ಎನ್ನಲಾಗುತ್ತಿದೆ.
ಇರಾನ್ ಪರಮಾಣು ಯೋಜನೆಗಳು ಅಮೆರಿಕಾ ಮತ್ತು ಇಸ್ರೇಲ್ ರಾಷ್ಟ್ರಗಳಲ್ಲಿ ಭಯ ಹುಟ್ಟಿಸಿದ್ದು, ಹಲವು ಆರ್ಥಿಕ ದಿಗ್ಬಂಧನಗಳನ್ನು ಹೇರುವ ಮೂಲಕ ಇರಾನ್ ಗೆ ತೊಡಕು ಉಂಟು ಮಾಡಲು ಯತ್ನಿಸಿದೆ. ಇದಲ್ಲದೇ, ತನ್ನ ಹಲವು ಪರಮಾಣು ವಿಜ್ಞಾನಿಗಳ ಕೊಲೆಯಲ್ಲಿ ಇಸ್ರೇಲ್ ಪಾತ್ರವಿದೆ ಎಂದು ಇರಾನ್ ನೇರವಾಗಿ ಆರೋಪ ಮಾಡಿದೆ. ಅಲ್-ಜಜೀರಾ ಅನುಸಾರ, ಎರಡು ವಾರಗಳ ಹಿಂದೆ ನಡೆದ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ಸಮರದ ಪ್ರತಿಕ್ರಿಯೆಯಾಗಿ, ಇರಾನ್ನ ವೈಮಾನಿಕ ಮಿಲಿಟರಿ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಈ ಭೂಗತ ಮಿಲಿಟರಿ ವಾಯುನೆಲೆಯನ್ನು ಅನಾವರಣಗೊಳಿಸಲಾಗಿದೆ ಎನ್ನಲಾಗಿದೆ. ಯಾವುದೇ ರೀತಿಯ ಸಂಭಾವ್ಯ ದಾಳಿಯನ್ನು ಎದುರಿಸಲು ನಾವು ಅಣಿಯಾಗಿದ್ದೇವೆ ಎಂಬ ಸಂದೇಶ ಕಳುಹಿಸಲು ಮುಂದಾಗಿದೆ.
ರಾಯಿಟರ್ಸ್ ಅನುಸಾರ, ಕಳೆದ ವರ್ಷ ಮೇ ತಿಂಗಳಲ್ಲಿ ಇರಾನ್ನ ಸೇನೆಯು ಡ್ರೋನ್ಗಳನ್ನು ಹೊಂದಿರುವ ಮತ್ತೊಂದು ಭೂಗತ ನೆಲೆಯ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದು, ತನ್ನ ಪ್ರಾದೇಶಿಕ ವೈರಿ ಇಸ್ರೇಲ್ನ್ ಸಂಭಾವ್ಯ ವಾಯುದಾಳಿಗಳಿಂದ, ಮಿಲಿಟರಿ ಸ್ವತ್ತುಗಳನ್ನು ರಕ್ಷಿಸಲು ಇರಾನ್ ನಿರಂತರ ಪ್ರಯತ್ನ ನಡೆಸುತ್ತಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
