Kalburgi Murder Case :ದಿನಂಪ್ರತಿ ಒಂದಲ್ಲ ಒಂದು ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ದಾಂಪತ್ಯ ಜೀವನದಲ್ಲಿ ಸಣ್ಣ ಪುಟ್ಟ ವಿಚಾರಕ್ಕೂ ಮನಸ್ತಾಪ ಉಂಟಾಗಿ ಬಿರುಕು ಮೂಡಲು ಆರಂಭವಾಗಿ ಕೊನೆಗೆ ಕೊಲೆಯಲ್ಲಿ ಅಂತ್ಯ ಕಂಡ ಅದೆಷ್ಟೋ ಪ್ರಕರಣಗಳು ನಮ್ಮ ಕಣ್ಣ ಮುಂದೆ ಇವೆ. ಅದೇ ರೀತಿ, ಪತಿ ಮಹಾಶಯನೊಬ್ಬ ಹೆಂಡತಿ ಕಪ್ಪಾಗಿದ್ದಾಳೆ ಎಂದು ಆಕೆಯನ್ನೇ ಕೊಂದನೇ (Kalburgi murder case) ಎಂಬ ಅನುಮಾನ ದಟ್ಟವಾಗಿ ಕಾಡುತ್ತಿದೆ.
ಏಳು ವರ್ಷಗಳ ಹಿಂದೆ ಮೂಲತ ಯಾದಗಿರಿ ಜಿಲ್ಲೆಯ ಶಹಪೂರ್ ಮೂಲದ ಕೆಲ್ಲೂರು ಗ್ರಾಮದ ಖಾಜಾ ಪಟೇಲ್ ಎಂಬಾತನ ಜೊತೆಗೆ ಫರ್ಜಾನಾ ಬೇಗಂ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದರು. ಮದುವೆ (Marriage) ಸಮಾರಂಭದಲ್ಲಿ ಹೆಣ್ಣಿನ ಹೆತ್ತವರು ಮಗಳು ಚೆನ್ನಾಗಿರಲಿ ಎಂದು ಆಶಿಸಿ 50 ಗ್ರಾಂ ಚಿನ್ನಾಭರಣ, 50 ಸಾವಿರ ವರದಕ್ಷಿಣೆ ನೀಡಿ ಮದುವೆ ಮಾಡಿಸಿದ್ದಾರೆ. ಖಾಜಾ ಪಟೇಲ್ ಗ್ರಾಮದಲ್ಲಿ ಕೃಷಿ (Agriculture)ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ. ಮದುವೆ ಮುಂಚೆ ಹೆಂಡತಿ ಎಂದರೆ ನೀನೇ ಚಿನ್ನ ನೀನೇ ನನ್ನ ಒಲವಿನ ಬಣ್ಣ ಎಂದೆಲ್ಲ ಹೇಳುತ್ತಿದ್ದವನು ಮದುವೆಯಾದ ಮೇಲಿನ ವರಸೆ ಕಂಡು ಹೆಂಡತಿಯೇ ಶಾಕ್ ಆಗಿ ಬಿಟ್ಟಿದ್ದಾಳೆ.
ಹೌದು!! ಮದುವೆಯಾದ ಮೇಲೆ ಹೆಂಡತಿಯನ್ನು(Wife) ಕಪ್ಪಗಿದ್ದಿಯಾ ಎಷ್ಟು ಪೌಡರ್ ಹಾಕಿದರೂ ಬಿಳಿ ಆಗಲ್ಲʼʼ ಎಂದು ಆಗಾಗ ಅವಹೇಳನ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಹೆಂಡತಿ ಜೀವನವೆಂಬ ಬಂಡಿಯನ್ನು ಸಂಭಾಳಿಸಿ ಕೊಂಡು ಹೋಗುತ್ತಿದ್ದಳು. ಆದರೆ, ಅಷ್ಟಕ್ಕೇ ಸುಮ್ಮನಾಗದ ಪತಿ ತವರು ಮನೆಯಿಂದ ವರದಕ್ಷಿಣೆಯಾಗಿ ಚಿನ್ನ, ಹಣದ ಬೇಡಿಕೆ ಇಡುತ್ತಿದ್ದ ಎನ್ನಲಾಗಿದೆ. ಒಂದೆಡೆ ಹಣಕ್ಕಾಗಿ ಕಿರುಕುಳ ಮತ್ತೊಂದೆಡೆ ಹೆಂಡತಿಯ ಬಣ್ಣದ ಬಗ್ಗೆ ದಿನವೂ ಮೂದಲಿಸುತ್ತಿದ್ದ ಪರಿಣಾಮ ಆಕೆಗೂ ಬೇಸರವಾಗಿದೆ.
ಮದುವೆಯಾದ ಹೊಸತರಲ್ಲಿ ದಾಂಪತ್ಯ ಜೀವನದಲ್ಲಿ ಎಲ್ಲವೂ ಚೆಂದ ಚೆಂದ ಅದೇ ಒಂದು ವರ್ಷ ಕಳೆದ ಮೇಲೆ ನಿಜವಾದ ಚಿತ್ರಣ ಅನಾವರಣವಾಗುತ್ತದೆ. ನೂರಾರು ಕನಸು ಹೊತ್ತು ಮದುವೆಯಾಗಿದ್ದ ಮಹಿಳೆ ಇದೀಗ, ಅನುಮಾನಸ್ಪದ ರೀತಿಯಲ್ಲಿ (Allegation) ಸಾವನ್ನಪ್ಪಿದ್ದು, ಕಲಬುರಗಿ (Kalaburagi) ಜಿಲ್ಲೆಯ ಜೇವರ್ಗಿ (Jewargi) ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ ಬುಧವಾರ ರಾತ್ರಿ ಫರ್ಜಾನಾ ಬೇಗಂ ಆಕೆಯ ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದೆ.
ಈ ದಂಪತಿಗೆ ಎರಡು ಮುದ್ದಾದ ಮಕ್ಕಳಿದ್ದು, ಪತಿ ಖಾಜಾ ಪಟೇಲ್ ಹೆಂಡತಿಗೆ ಕೆಲ ತಿಂಗಳ ಹಿಂದೆ, ಇಬ್ಬರ ಮುಂಜವಿ ಮಾಡಲು, ತವರು ಮನೆಗೆ ಹೋಗಿ ಚಿನ್ನಾಭರಣ ತರಬೇಕು ಎಂದು ಕಿರುಕುಳ ನೀಡಿದ್ದು, ಇದಕ್ಕೆ ಆಕೆ ಸಮ್ಮತಿ ಸೂಚಿಸದೆ ಇದ್ದ ಹಿನ್ನೆಲೆ ಪ್ರತಿನಿತ್ಯ ಹಲ್ಲೆ ನಡೆಸಿ ಕಿರುಕುಳ ನೀಡಲು ಪ್ರಾರಂಭಿಸಿದ್ದಾನೆ ಎನ್ನಲಾಗಿದೆ.ಈ ನಡುವೆ ಮಹಿಳೆಯ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದ ಹಿನ್ನೆಲೆ ಈ ಕೃತ್ಯದ ಹಿಂದೆ ಪತಿಯ ಕೈವಾಡವಿದೆ ಎಂಬ ಶಂಕೆ ಭುಗಿಲೆದ್ದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಆಕೆಯ ಪತಿ (Husband)ಮತ್ತು ಕುಟುಂಬದವರು ಮಹಿಳೆಯ ಮನೆಯವರಿಗೆ ಯಾವುದೇ ಮಾಹಿತಿ ನೀಡಿಲ್ಲ ಎನ್ನಲಾಗಿದೆ.
ಮೃತ ಮಹಿಳೆಯ ಸಾವಿನ ಬಗ್ಗೆ ಅಕ್ಕಪಕ್ಕದ ನಿವಾಸಿಗಳ ಮೂಲಕ ಮಹಿಳೆಯ ಕುಟುಂಬಕ್ಕೆ ಮಾಹಿತಿ ದೊರೆತಿದ್ದು, ಫರ್ಜಾನಾ ಬೇಗಂ ಹೆತ್ತವರು ಈ ಬಗ್ಗೆ ಗ್ರಾಮಕ್ಕೆ ಆಗಮಿಸಿ ವಿಚಾರಣೆ ನಡೆಸಿದ್ದು, ಆತನ ಮನೆಗೆ ಹೋಗಿ ತಮ್ಮ ಮಗಳ ಮೃತ ದೇಹ ಕಂಡು ಇದು ಆತ್ಮಹತ್ಯೆ ಅಲ್ಲ ಬದಲಿಗೆ ಫರ್ಜಾನಾ ಬೇಗಂ ಪತಿ ಖಾಜಾ ಪಟೇಲ್ ಮತ್ತು ಅವರ ಕುಟುಂಬದವರು ಕತ್ತು ಹಿಸುಕಿ ಕೊಲೆ(Murder) ಮಾಡಿ, ನಂತರ ತಾವೇ ನೇಣು ಬಿಗಿದು ಕೊಲೆ ಮಾಡಿರುವ ಕುರಿತು ಫರ್ಜಾನಾ ಬೇಗಂ ಪೋಷಕರು ಆರೋಪ ಮಾಡಿದ್ದಾರೆ. ಅಷ್ಟೆ ಅಲ್ಲದೇ, ಈ ಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ ಹಾಗೂ ಹೇಳುವಷ್ಟು ಎತ್ತರ ಕೂಡ ಇಲ್ಲ.ಹೀಗಾಗಿ, ಇದು ಕೊಲೆ ಎಂಬುದು ಪೋಷಕರ ಆರೋಪವಾಗಿದೆ.
ಸದ್ಯ ಫರ್ಜಾನಾ ಬೇಗಂ ಸಾವಿನ ಕುರಿತಂತೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಫರ್ಜಾನಾ ಪತಿ ಖಾಜಾ ಪಟೇಲ್ ನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ವರದಿ ದೊರೆತ ಬಳಿಕ ಫರ್ಜಾನಾ ಬೇಗಂ ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಇಲ್ಲವೇ ಕೊಲೆಯಾ ಎಂಬ ರೋಚಕ ಸತ್ಯ ಬಯಲಾಗಬೇಕಾಗಿದೆ. ಬಾಳಿ ಬದುಕಬೇಕಿದ್ದ ಜೀವ ಸಾವಿನ ಮನೆಗೆ ಆಹ್ವಾನ ಪಡೆದಿದ್ದು, ಮೃತ ಮಹಿಳೆಯ ಪೋಷಕರ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
