Kalburagi: ಹಾವು ಕಂಡ್ರೆ ಸಾಕು ಜನರು ಹೌಹಾರಿ ಓಡಿ ಹೋಗುತ್ತಾರೆ. ಹಾವುಗಳೂ ಕೂಡಾ ಸದಾ ತೊಂದರೆ ಕೊಡುವ ಜೀವಿ ಮನುಷ್ಯರ ಕಂಡ್ರೆ ಮೆತ್ತಗೆ ಸರಸರ ಸರಿದು ‘ ಬೇಡಪ್ಪಾ ಇವ್ನ ಸಾವಾಸ ‘ ಎಂದು ಸರಿದು ಹೋಗ್ತಾವೆ. ಅಂಥದ್ದರಲ್ಲಿ ಅಲ್ಲೊಂದು ಕಡೆ ಓರ್ವ ಬಾಲಕನಿಗೆ ಕಳೆದ 2 ತಿಂಗಳಲ್ಲಿಯೇ 9 ಬಾರಿ ಹುಡುಕಿ ಹುಡುಕಿ ಹಾವು ಕಚ್ಚಿದೆ.
ಕಲಬುರಗಿಯ (Kalburagi) ಜಿಲ್ಲೆಯ ಚಿತ್ತಾಪುರ ತಾಲೂಕಿನ ಹಳಕರ್ಟಿ ಗ್ರಾಮದ ನಿವಾಸಿ ಪ್ರಜ್ವಲ್‍ಗೆ ಜುಲೈ 3 ರಂದು ಮನೆ ಅಂಗಳದಲ್ಲಿ ಆಟವಾಡುವಾಗ ಮೊದಲ ಬಾರಿ ಹಾವು (Snake Bite) ಕಚ್ಚಿದೆ. ಆಗ ಈ ಬಾಲಕನ ಪೋಷಕರು ಮನೆ ಮದ್ದು ಮಾಡಿದ್ದಾರೆ. ಅಲ್ಲೆ ಸಿಕ್ಕ ಬೇವಿನ ಮರದ ಎಲೆ ಹಾಗೂ ಖಾರದ ಪುಡಿ ತಿನ್ನಿಸಿದ್ದಾರೆ. ಆಗ ಬಾಯಿಗೆ ಸಿಹಿ, ಖಾರ ಎರಡೂ ಹತ್ತುತ್ತಿಲ್ಲ ಅಂತ ಕೂಡಾ ಆ ಬಾಲಕ ಹೇಳಿದ್ದಾನೆ. ನಂತರ ಆತನನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ.
ಅದಾದ ಬಳಿಕ ಈ ಬಾಲಕನಿಗೆ ನಾಲ್ಕೈದು ದಿನಗಳಿಗೊಮ್ಮೆ ಹಾವು ಕಚ್ಚುತ್ತಾ ಬಂದಿದೆ. ಹಾಗೆ ಇಲ್ಲಿಯವರೆಗೆ, ಕಳೆದ 2 ತಿಂಗಳಿನಲ್ಲಿ ಒಟ್ಟು 9 ಬಾರಿ ಹಾವು ಕಡಿತವಾಗಿರೋದು ಸುದ್ದಿಯಾಗಿದೆ. ಒಟ್ಟು 9 ಬಾರಿ ಹಾವು ಕಚ್ಚಿರುವ ಗುರುತುಗಳು ಆತನ ಕಾಲಿನಲ್ಲಿ ಮೂಡಿದೆ. ಆತನಿಗೆ 5 ಬಾರಿ ಕಲಬುರ್ಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರೆ, ಉಳಿದ 4 ಬಾರಿ ಸ್ಥಳೀಯ ನಾಟಿ ವೈದ್ಯರಿಂದ ಔಷಧಿಯನ್ನು ಕೊಡಿಸಲಾಗಿದೆ. ಆದರೆ ವಿಚಿತ್ರವೆಂದರೆ ಇಲ್ಲಿಯವರೆಗೂ ಆ ಹಾವು ಪ್ರಜ್ವಲ್ ಗೆ ಮಾತ್ರ ಕಾಣಿಸಿದೆ, ಬೇರೆ ಯಾರ ಕಣ್ಣಿಗೂ ಸಹ ಕಂಡಿಲ್ಲ. ಆತನ ಮನೆಯ ಸುತ್ತ ಹಾವು ಹುಡುಕುವುದೇ ಸದ್ಯ ನೆರೆಹೊರೆಯವರ ದಿನನಿತ್ಯದ ಕೆಲಸವಾಗಿದೆಯಂತೆ.
ಈಗೀಗ ಬಾಲಕ ಒಬ್ಬನ ಮೇಲೆ ಮಾತ್ರ ಹಾವು ಕಚ್ಚಿರುವುದಾಗಿ ಹೇಳುತ್ತಿರುವುದು ಸಹ ಅನುಮಾನಕ್ಕೂ ಸಹ ಎಡೆಮಾಡಿಕೊಟ್ಟಿದೆ. ಪ್ರತಿ ಬಾರಿ ಹಾವು ಕಚ್ಹೊದು, ಮನೆಯವರು ಸಾವಿರಾರು ರೂಪಾಯಿ ಖರ್ಚು ಮಾಡಿ ಮಗನಿಗೆ ಚಿಕಿತ್ಸೆ ಕೊಡಿಸುತ್ತಾ ಇರೋದು ನಡೀತಿದ್ದು ಜನರು ದಿಕ್ಕು ಕಾಣದಾಗಿದ್ದಾರೆ. ಹೀಗಾಗಿ ಈಗ ಪೋಷಕರು ದೇವರುಗಳ ಮೊರೆ ಹೋಗುತ್ತಿದ್ದಾರೆ ಎನ್ನುವ ಮಾಹಿತಿಯಿದೆ.
