Chaitra Kundapura Case: ಹಿಂದೂ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ (Chaitra Kundapura) ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ ವಂಚಿಸಿರುವುದು ಮತ್ತು ಇನ್ನಿತರ ವಂಚನೆ ಕೇಸಲ್ಲಿ ಭಾಗಿಯಾದ ಪಕ್ರರಣ ಬಂಧನಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ (M Lakshman) ಗೆ ನೋಟಿಸ್ ನೀಡಲು ಸಿಸಿಬಿಯಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಈಗಾಗಲೇ ಚೈತ್ರಾ ಕುಂದಾಪುರ ವಂಚನೆ ಕೇಸ್ ಬಗ್ಗೆ ಇತ್ತೀಚೆಗೆ ಸುದ್ದಿಗೋಷ್ಠಿ ಮಾಡಿದ್ದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ, ವಂಚನೆ ಕೇಸ್ನಲ್ಲಿ ಈವರೆಗೆ ಇಲ್ಲದ ಹೆಚ್ಚಿನ ವಿಚಾರ, ಬೇರೆ ಬೇರೆ ವ್ಯಕ್ತಿಗಳ ಹೆಸರು ಪ್ರಸ್ತಾಪಿಸಿದ್ದರು. ಹಾಗಾಗಿ ಪ್ರಕರಣದ ಬಗ್ಗೆ ಮಾಹಿತಿ ನೀಡುವಂತೆ ನೋಟಿಸ್ ನೀಡಲು ತನಿಖಾಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ಅಲ್ಲದೆ ಎಂ.ಲಕ್ಷ್ಮಣ ಅವರು, ಚೈತ್ರಾ ಕುಂದಾಪುರಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರ ಜೊತೆ ನೇರ ಸಂಪರ್ಕವಿದೆ. ಮಾಜಿ ಸಚಿವ ಸಿ.ಟಿ ರವಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಚಿಂತಕ ಚಕ್ರವರ್ತಿ ಸೂಲಿಬೆಲೆ ಜೊತೆ ಈಕೆಯ ಸಂಬಂಧ ಏನು ಅನ್ನೋದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದರು.
ಮುಖ್ಯವಾಗಿ ಪಿಎಸ್‌ಐ ಹಗರಣಕ್ಕೂ ಚೈತ್ರಾಗೂ ಸಂಬಂಧವಿದೆಯಾ ಎಂಬುವುದರ ಬಗ್ಗೆ ತನಿಖೆಯಾಗಬೇಕು. ಚೈತ್ರಾ ಕುಂದಾಪುರ ಪಿಎಸ್‌ಐ ಸೇರಿದಂತೆ ನಾಲ್ಕಕ್ಕೂ ಹೆಚ್ಚು ಹಗರಣದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಇದೆ. ಆಕೆಗೆ ಜೈಲಿನಲ್ಲಿರುವ ಕೆಲವರ ಸಂಪರ್ಕ ಇದೆ. ಈ ಬಗ್ಗೆ ನಮ್ಮ ಸರ್ಕಾರ ಪ್ರಾಮಾಣಿಕ ತನಿಖೆ ಮಾಡಿಸುತ್ತದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಹೇಳಿದ್ದರು.
ಈ ಎಲ್ಲಾ ಮಾಹಿತಿ ಮೂಲಗಳನ್ನು ಕಲೆ ಹಾಕುವ ನಿಟ್ಟಿನಲ್ಲಿ, ಪ್ರಕರಣದ ಬಗ್ಗೆ ಮಾಹಿತಿ ನೀಡುವಂತೆ ಎಂ.ಲಕ್ಷ್ಮಣ ಅವರಿಗೆ ನೋಟಿಸ್ ನೀಡಲು ತನಿಖಾಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
