ಕರ್ನಾಟಕ ಚುನಾವಣೆಯ ಹಣಾಹಣಿಗೆ ಕೇವಲ ಎರಡೇ ತಿಂಗಳು ಬಾಕಿ ಇರುವ ಹಿನ್ನೆಲೆ ಬಜೆಟ್ ಬಗ್ಗೆ ಜನರಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದೆ. ಇದು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕೊನೆಯ ಬಜೆಟ್ ಆಗಿದ್ದು ಹೀಗಾಗಿ, ಈ ಬಾರಿ ಜನಪರ ಬಜೆಟ್ ಮಂಡಿಸುವ ಸಾಧ್ಯತೆ ದಟ್ಟವಾಗಿದೆ.
ರಾಜ್ಯದ ವಿವಿಧ ಜಾತಿಗಳು, ಪ್ರಮುಖವಾಗಿ ಎಸಿ/ಎಸ್‌ಟಿ ಸಮುದಾಯಗಳು, ಮಧ್ಯಮ ವರ್ಗದವರು, ನಗರವಾಸಿಗಳು ತಳ ಸಮುದಾಯಗಳು, ರೈತರು, ಮಹಿಳೆಯರು, ಸರ್ಕಾರಿ ನೌಕರರು, ಕೂಲಿ-ಕಾರ್ಮಿಕರನ್ನು ಕೇಂದ್ರಿಕರಿಸಿ ಈ ಬಾರಿಯ ಬಜೆಟ್ ತಯಾರಿಸಲಾಗಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಮೇದಾರ, ಅಕ್ಕಸಾಲಿಗ, ಗಾಣಿಗ, ಮಡಿವಾಳ, ಕುಂಬಾರ, ಹೂಗಾರ, ಚಮ್ಮಾರ, ಕಂಬಾರ ಸೇರಿದಂತೆ ಹಲವು ಸಣ್ಣ ಪುಟ್ಟ ಸಮುದಾಯಗಳಿಗು ಕೂಡ ಪ್ರತ್ಯೇಕ ನಿಗಮಗಳನ್ನು ರಚನೆ ಮಾಡುವ ಸಂಪ್ರದಾಯಿಗ ವೃತ್ತಿಯಲ್ಲಿ ಇರುವವರಿಗೆ ಪ್ರೋತ್ಸಾಹ ಧನ ನೀಡಲು ಬೊಮ್ಮಾಯಿ ಮುಂದಾಗಿದ್ದಾರೆ ಎಂದು ಹೇಳಲಾಗಿದೆ
ಬಜೆಟ್ ನಲ್ಲಿ ರೈತರಿಗೆ ಭರಪೂರ ಕೊಡುಗೆ ಲಭ್ಯವಾಗಲಿದ್ದು, ಈಗ ರೈತರಿಗೆ ₹ 3 ಲಕ್ಷ ರೂಪಾಯಿ ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ. ಈ ಬಾರಿ ಶೂನ್ಯ ಬಡ್ಡಿ ದರದಲ್ಲಿ ಇದನ್ನು ₹ 5 ಲಕ್ಷಕ್ಕೆ ಏರಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ. ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ರೈತರಿಗೆ ಅವಶ್ಯಕತೆಗೆ ಅನುಗುಣವಾಗಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ . ಈ ವರ್ಷ 30 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 25,000 ಕೋಟಿ ರೂ. ಗಳಷ್ಟು ಸಾಲ ವಿತರಿಸಲಾಗುವ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಬಜೆಟ್‌ನಲ್ಲಿ ಘೋಷಿಸಿದ್ದಾರೆ.
ರಾಜ್ಯದ 56 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರ ಕುಟುಂಬಗಳಿಗೆ 180 ಕೋಟಿ ರೂ. ವೆಚ್ಚದಲ್ಲಿ ಜೀವನ್‌ಜ್ಯೋತಿ ವಿಮಾ ಯೋಜನೆಯ ಮೂಲಕ ರೈತರಿಗೆ ಆರ್ಥಿಕ ಭದ್ರತೆ ಒದಗಿಸುವ ಕ್ರಮ ಕೈಗೊಳ್ಳಲಾಗುತ್ತದೆ. ಇದಲ್ಲದೇ, ರೈತರಿಗೆ ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳು ಲಭ್ಯವಾಗುವಂತೆ ಮಾಡಲು ಕೃಷಿ ಇಲಾಖೆಯು ಈಗಾಗಲೇ ನಿರ್ವಹಿಸುತ್ತಿರುವ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ 300 ಹೈಟೆಕ್ ಹಾರ್ವೆಸ್ಟರ್ ಗಳನ್ನು ಹಂತವಾಗಿ ಒದಗಿಸಲಿದೆ ಎನ್ನಲಾಗಿದೆ. 2023-24ನೇ ಸಾಲಿನಲ್ಲಿ 100 ಹೈಟೆಕ್ ಹಾರ್ವೆಸ್ಟರ್ ಗಳಿಗೆ ತಲಾ 50 ಲಕ್ಷ ರೂ. ನಂತೆ, ಈ ವರ್ಷ 50 ಕೋಟಿ ರೂ. ಒದಗಿಸಲಾಗುತ್ತದೆ ಎನ್ನಲಾಗಿದೆ.
ಇದರ ಜೊತೆಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ‘ಭೂ ಸಿರಿ” ಎಂಬ ನೂತನ ಯೋಜನೆಯಡಿ 2023-24ನೇ ಸಾಲಿನಿಂದ 10 ಸಾವಿರ ರೂ. ಗಳ ಹೆಚ್ಚುವರಿ ಸಹಾಯಧನ ನೀಡುವ ಸಂಭವ ಹೆಚ್ಚಿದೆ. ತುರ್ತು ಸಂದರ್ಭಗಳಲ್ಲಿ ರೈತರಿಗೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಮುಂತಾದ ಪರಿಕರಗಳನ್ನು ಖರೀದಿ ಮಾಡಲು ನೆರವಾಗುತ್ತದೆ. ಈ ಮೊತ್ತದಲ್ಲಿ ರಾಜ್ಯ ಸರ್ಕಾರದ 2,500 ರೂ. ಹಾಗೂ ನಬಾರ್ಡ್ ನ 7,500 ರೂ. ಒಳಗೊಂಡಿದ್ದು, ರಾಜ್ಯದ ಸುಮಾರು 50 ಲಕ್ಷ ರೈತರಿಗೆ ಸಹಾಯ ವಾಗುವ ಭರವಸೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೊಂದಿದ್ದಾರೆ.
ಗ್ರಾಮೀಣ ಸ್ವಯಂ ಉದ್ಯೋಗ ಮಾಡುವವರಿಗೆ 5 ಲಕ್ಷದವರೆಗೆ ಸುತ್ತುನಿಧಿ ಸಾಲಯೋಜನೆ,ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೂ ನೆರವಾಗುವ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ. ಮಹಿಳೆಯರಿಗೂ ಕೂಡ ನೆರವಾಗುವ ನಿಟ್ಟಿನಲ್ಲಿ ಪ್ರತಿಕುಟುಂಬದ ಮಹಿಳೆಯಗೆ ₹1,500 ಪ್ರೋತ್ಸಾಹ ಧನ ನೀಡುವ ಗೃಹಿಣಿ ಶಕ್ತ ಯೋಜನೆ ಘೋಷಿಸುವ ಸಾಧ್ಯತೆಗಳಿವೆ.
