Ajit Kumar Rai: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಕೆ.ಆರ್. ಪುರಂ ತಹಶೀಲ್ದಾರ್ ಅಜಿತ್ ಕುಮಾರ್ ರೈ (Ajit kumar Rai) ಮನೆ ಮೇಲೆ ದಾಳಿ ಮಾಡಿತ್ತು. ನಂತರ ಆದಾಯ ಮೀರಿ ಅಧಿಕ ಆಸ್ತಿ ಗಳಿಕೆ ದಾಖಲೆ ಸಮೇತ ಸಾಬೀತು ಆದಮೇಲೆ ಈತನನ್ನು ವಶಕ್ಕೆ ಪಡೆಯಲಾಗಿತ್ತು.
ಸದ್ಯ ಜಾಮೀನು ಮಂಜೂರು ಮಾಡುವಂತೆ ಕೋರಿ ಸಿಟಿ ಸಿವಿಲ್ ಕೋರ್ಟ್ಗೆ ಅಜಿತ್ ಕುಮಾರ್ ರೈ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಾಧಾಕೃಷ್ಣ ಅವರು ವಾದ-ಪ್ರತಿವಾದವನ್ನು ಸುದೀರ್ಘವಾಗಿ ಆಲಿಸಿ ಷರತ್ತುಬದ್ಧ ಜಾಮೀನು ನೀಡಿದ್ದಾರೆ.
ಮೂಲತಃ ಅಜಿತ್ ರೈ ದಕ್ಷಿಣ ಕನ್ನಡದ ಪುತ್ತೂರು ತಾಲೂಕಿನ ಕೆಯ್ಯೂರು ಮೂಲದವ. ಈತನ ಪೂರ್ತಿ ಹೆಸರು ಅಜಿತ್ ಕುಮಾರ್ ರೈ ಸೊರಕೆ. ಸದ್ಯ ಬೆಂಗಳೂರಿನ ಕೆಆರ್ ಪುರದಲ್ಲಿ ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ.
ಅಜಿತ್ ರೈ ತಂದೆ ಪುತ್ತೂರಿನಲ್ಲಿ ಭೂ ಮಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕರ್ತವ್ಯದಲ್ಲಿದ್ದಾಗಲೇ ತಂದೆ ತೀರಿಕೊಂಡಿದ್ದರು. ಹೀಗಾಗಿ ಅನುಕಂಪದ ಆಧಾರದ ಮೇಲೆ ಕಂದಾಯ ಇಲಾಖೆಯಲ್ಲಿ ಕೆಲಸ ನೀಡಲಾಗಿತ್ತು. ಅಲ್ಲಿ ಕೆಲ ವರ್ಷ ಕೆಲಸ ಮಾಡಿದ್ದ ಅಜಿತ್, ಬಳಿಕ ಹಲವು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ, ಬಡ್ತಿ ಪಡೆದು ತಹಶೀಲ್ದಾರ್ ಆಗಿದ್ದ.
ಅಜಿತ್ ರೈ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದು, ಲೋಕಾಯುಕ್ತ ಪೊಲೀಸರಿಗೆ ಹಲವು ದೂರುಗಳು ಬಂದಿದ್ದವು ಎನ್ನಲಾಗಿದೆ. ಇದೇ ಆಧಾರದ ಮೇಲೆ ಕಳೆದ ಜುಲೈನಲ್ಲಿ ಲೋಕಾಯುಕ್ತ ಪೊಲೀಸರು ಅಜಿತ್ ಕಚೇರಿ ಹಾಗೂ ಆತನ ಸಂಬಂಧಿಕರಿಗೆ ಸೇರಿದ 10 ಪ್ರದೇಶಗಳ ಮೇಲೆ ದಾಳಿ ಮಾಡಿ, ಪರಿಶೀಲನೆ ಮಾಡಿದ್ದರು. ಈ ವೇಳೆ ಕೋಟಿ ಕೋಟಿ ಅಕ್ರಮ ಆಸ್ತಿ ದಾಖಲೆ ಕಂಡು ಲೋಕಾಯುಕ್ತರೆ ಬೆಚ್ಚಿ ಬಿದ್ದಿದ್ದರು.
ಇನ್ನು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿರುವ ದೇವನಹಳ್ಳಿ ಬಳಿ ಅಜಿತ್ ರೈ ಸಾಕಷ್ಟು ಆಸ್ತಿ ಖರೀದಿಸಿದ್ದ. ಸುಮಾರು 150 ಎಕರೆಗಿಂತ ಜಾಸ್ತಿ ಜಮೀನನ್ನು ಬೇನಾಮಿಗಳ ಹೆಸರುಗಳಲ್ಲಿ ಹೊಂದಿದ್ದ.
ಅದಲ್ಲದೆ ಲೋಕಾಯುಕ್ತ ದಾಳಿ ವೇಳೆ ಸುಮಾರು 200 ಎಕರೆ ಜಮೀನಿಗೆ ಸಂಬಂಧಿಸಿದ 150 ರಿಂದ 160 ಕ್ರಯಪತ್ರಗಳು ದೊರೆತಿವೆ ಎನ್ನಲಾಗಿದೆ. ಈ ಜಮೀನುಗಳ ಮೌಲ್ಯವು ಸುಮಾರು 100 ಕೋಟಿ ರೂ. ದಾಟಬಹುದು ಎಂದು ಅಂದಾಜಿಸಲಾಗಿದೆ.
ಭ್ರಷ್ಟ ಅಧಿಕಾರಿ ಅಜಿತ್ ರೈಗೆ ಬೇರೆ ಬೇರೆ ರೀತಿಯ ಶೋಕಿಗಳಿದ್ದವು ಎನ್ನಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ತನ್ನ 150 ಎಕರೆ ಜಮೀನಿನಲ್ಲಿ ದೇಶದ ಎರಡನೇ ಹಾಗೂ ರಾಜ್ಯದ ಮೊದಲ ಫಾರ್ಮುಲಾ-1 ರೇಸ್ ಟ್ರ್ಯಾಕ್ ನಿರ್ಮಾಣಕ್ಕೆ ಈತ ಪ್ಲಾನ್ ಮಾಡಿಕೊಂಡಿದ್ದ ಎನ್ನಲಾಗಿದೆ.
ಇದೀಗ ಲೋಕಾಯುಕ್ತರಿಂದ ಬಂಧಿತನಾಗಿ, ಜೈಲು ಸೇರಿದ್ದ ತಹಶೀಲ್ದಾರ್ ಅಜಿತ್ ರೈಗೆ ಕೊನೆಗೂ ಬೇಲ್ ಸಿಕ್ಕಿದೆ. ಆದರೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಅಜಿತ್ ರೈಗೆ ಷರತ್ತು ಬದ್ಧ ಜಾಮೀನು ನೀಡಿದೆ.
ಇಂದು ಬೆಂಗಳೂರಿನ 23ನೇ ಸಿಟಿ ಸಿವಿಲ್ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ ಅವರು ಜಾಮೀನು ಮಂಜೂರು ಮಾಡಿದ್ದಾರೆ. ಅಜಿತ್ ರೈ ಪರ ಹೈಕೋರ್ಟ್ ನ ಹಿರಿಯ ವಕೀಲ ಎಂ.ಎಸ್. ಶ್ಯಾಮಸುಂದರ್ ವಾದ ಮಂಡಿಸಿದ್ದರು.
ಅರ್ಜಿದಾರರ ಪತ್ನಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವ ಕಾರಣ ಚಿಕಿತ್ಸೆಯ ದೃಷ್ಟಿಯಿಂದ ಜಾಮೀನು ಮಂಜೂರು ಮಾಡಲಾಗಿದೆ. 5 ಲಕ್ಷ ಮೊತ್ತದ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ನೀಡಬೇಕೆಂದು ಷರತ್ತು ವಿಧಿಸಿದ್ದು, ಜೊತೆಗೆ ತನಿಖಾಧಿಕಾರಿಗೆ ಸಹಕರಿಸಬೇಕೆಂಬ ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿ ಆದೇಶಿಸಲಾಗಿದೆ.
ಇದನ್ನೂ ಓದಿ: ‘ ಮುಸ್ಲಿಮರ ಓಟು ನಮಗೆ ಬೇಡ ಬರ್ತಿದ್ದ ಮುಸ್ಲಿಮರ 30 % ಓಟುಗಳೂ ಕೆಲವರ ಮಾತಿನ ತೆವಲಿಗೆ ತೇಲಿ ಹೋದ್ವು’: ಛಲವಾದಿ ಹೇಳಿಕೆ
