Kisan credit cards:ಮೊನ್ನೆ ತಾನೆ ವಿಧಾನಸೌಧ(Vidhana soudha)ದಲ್ಲಿ ಮಂಡನೆಯಾಗಿರುವ ಈ ವರ್ಷದ ಬಜೆಟ್(budget) ಚುನಾವಣಾ ಬಜೆಟ್ ಎಂದೇ ಎಲ್ಲೆಡೆ ಬಿಂಬಿತವಾಗುತ್ತಿದೆ. ಅಲ್ಲದೆ ಆಡಳಿತ ರೂಢ ಬಿಜೆಪಿ ಕೂಡ ಚುನಾವಣೆ ನಿಮಿತ್ತ ಹಲವಾರು ಸಮುದಾಯಗಳನ್ನು, ರೈತಾಪಿ ವರ್ಗದವರನ್ನು, ಯುವಕರನ್ನು ತಮ್ಮತ್ತ ಸೆಳೆಯುವ ನಿಟ್ಟಿನಲ್ಲಿ ಬಜೆಟ್ ನಲ್ಲಿ ಹಲವಾರು ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ಅದೇನೇ ಇರಲಿ ಒಟ್ಟಾರೆ ಬಜೆಟ್ ನಲ್ಲಿ ಇರುವಂತಹ ಎಲ್ಲಾ ಘೋಷಣೆಗಳು ಯೋಜನೆಗಳು ಕಾರ್ಯರೂಪಕ್ಕೆ ಬಂದರೆ ಹಲವಾರು ಸಮುದಾಯಗಳಿಗೆ, ವರ್ಗಗಳಿಗೆ ಅನುಕೂಲವಾಗುವುದಂತೂ ಸತ್ಯ.
ಇನ್ನು ಚುನಾವಣಾ ಸನಿಹದಲ್ಲಿ ರೈತರನ್ನು ಓಲೈಸುವ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Bommai) ಅವರು ರೈತರಿಗೆ ನೀಡುವ ಬಡ್ಡಿ ರಹಿತ ಅಲ್ಪಾವಧಿ ಸಾಲದ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸುವುದಾಗಿ ಶುಕ್ರವಾರ ಬೆಟ್‌ನಲ್ಲಿ ಘೋಷಿಸಿದ್ದಾರೆ. ಇದು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಅಗತ್ಯ ಸಿದ್ಧತೆಗಳನ್ನು ಮಾಡಲು, ಅಗತ್ಯ ಆಧಾರಿತ ಸಾಲ ಸೌಲಭ್ಯದ ಲಭ್ಯತೆಯನ್ನು ಖಚಿತಪಡಿಸುತ್ತದೆ. ಈ ವರ್ಷ 30 ಲಕ್ಷಕ್ಕೂ ಹೆಚ್ಚು ರೈತರಿಗೆ 25,000 ಕೋಟಿ ರೂಪಾಯಿ ಸಾಲ ವಿತರಿಸಲಾಗುವುದು ಎಂದು ಬೊಮ್ಮಾಯಿ ಹೇಳಿದ್ದಾರೆ.
‘ಕಿಸಾನ್ ಕ್ರೆಡಿಟ್ ಕಾರ್ಡ್’(Kisan credit cards) ಹೊಂದಿರುವವರಿಗೆ ‘ಭೂ ಸಿರಿ’(Bhu siri) ಎಂಬ ಹೊಸ ಯೋಜನೆ ಅಡಿಯಲ್ಲಿ 2023-24 ನೇ ಸಾಲಿನಲ್ಲಿ 10,000 ರೂ ಹೆಚ್ಚುವರಿ ಸಹಾಯಧನ ನೀಡಲು ಸರ್ಕಾರ ನಿರ್ಧರಿಸಿದೆ. ಇದು ರೈತರಿಗೆ ತುರ್ತು ಸಮಯದಲ್ಲಿ ಬೀಜಗಳು, ರಸಗೊಬ್ಬರಗಳು, ಕೀಟನಾಶಕಗಳು ಮತ್ತು ಇತರ ಕೃಷಿ ಇನ್‌ಪುಟ್‌ಗಳನ್ನು ಖರೀದಿಸಲು ಅನುಕೂಲವಾಗುತ್ತದೆ. ರಾಜ್ಯವು ರೂ 2,500 ಮತ್ತು ನಬಾರ್ಡ್ (ನ್ಯಾಷನಲ್ ಬ್ಯಾಂಕ್ ಫಾರ್ ಅಗ್ರಿಕಲ್ಚರ್ ಅಂಡ್ ರೂರಲ್ ಡೆವಲಪ್‌ಮೆಂಟ್) ರೂ 7,500 ನೀಡಲಿದೆ. ಇದರಿಂದ ರಾಜ್ಯದ ಸುಮಾರು 50 ಲಕ್ಷ ರೈತರಿಗೆ ಅನುಕೂಲವಾಗಲಿದೆ.
ಅಲ್ಲದೆ ‘ಶ್ರಮ ಶಕ್ತಿ’(Shrama Shakti) ಯೋಜನೆಯನ್ನು ಘೋಷಿಸಿದ್ದಾರೆ, ಇದು ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಭೂರಹಿತ ಮಹಿಳಾ ರೈತ ಕಾರ್ಮಿಕರಿಗೆ ಪ್ರತಿ ತಿಂಗಳು ತಲಾ 500 ರೂ. ಲಾಭವನ್ನು ನೀಡುತ್ತದೆ. ಪ್ರೌಢಶಾಲೆಗಳಿಂದ ಪದವಿ ಪಡೆದ ಎಲ್ಲಾ ಮಕ್ಕಳು ತಮ್ಮ ಉನ್ನತ ಶಿಕ್ಷಣವನ್ನು ಮುಂದುವರಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ಅವರು ‘ಸಿಎಂ ವಿದ್ಯಾ ಶಕ್ತಿ ಯೋಜನೆ’ ಅಡಿಯಲ್ಲಿ ಸರ್ಕಾರಿ ಪದವಿ ಪೂರ್ವ ಮತ್ತು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಉಚಿತ ಶಿಕ್ಷಣವನ್ನು ಘೋಷಿಸಿದರು. ಇದರಿಂದ ರಾಜ್ಯದ ಎಂಟು ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
ಈ ಕಿಸಾನ್ ಕಾರ್ಡ್ ಇದ್ದರೆ ಏನು ಲಾಭ? ಇದನ್ನು ಮಾಡಿಸುವುದು ಹೇಗೆ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ಮೊದಲಿಗೆ ಕಿಸಾನ್ ಕಾರ್ಡಿನ ಲಾಭಗಳನ್ನು ತಿಳಿಯೋದಾದ್ರೆ, ಪ್ರತಿ ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಮೂರು ವರ್ಷಗಳ ಕಾಲ ಮಾನ್ಯವಾಗಿರುತ್ತದೆ. ಬೆಳೆಯ ಕಟಾವಿನ ಬಳಿಕ ಸಾಲದ ಮರುಪಾವತಿ ಮಾಡಬೇಕಾಗುತ್ತದೆ. ಈ ಯೋಜನೆಯಡಿ ರೈತರು ಯಾವುದೇ ಅಡಮಾನ ಇಲ್ಲದೆ 1.6 ಲಕ್ಷ ರೂಪಾಯಿವರೆಗೆ ಸಾಲವನ್ನು ಪಡೆಯಬಹುದು ಎನ್ನುವುದು ವಿಶೇಷವಾಗಿದೆ. ರೈತರು ತಮ್ಮ ಹೊಲಗಳಿಗೆ ಬಿತ್ತನೆ ಮಾಡುವುದು, ಬೆಳೆ ಪೋಷಣೆ, ಬೆಳೆಗಳಿಗೆ ರಸಗೊಬ್ಬರ ಹಾಕುವುದು ಮೊದಲಾದ ಕೃಷಿ ಚಟುವಟಿಕೆಗಳಿಗೆ ಸಾಲ ಪಡೆಯಲು ಕಿಸಾನ್ ಕ್ರೆಡಿಟ್ ಕಾರ್ಡ್(ಕೆಸಿಸಿ) ಬಳಸಬಹುದು.
ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಹೇಗೆ ಅರ್ಜಿ ಸಲ್ಲಿಸುವುದು ಹೇಗೆ, ಯಾವೆಲ್ಲ ದಾಖಲೆಗಳು ಬೇಕು, ಬಡ್ಡಿದರ ಎಷ್ಟಿದೆ ಎಂದು ನೋಡುವುದಾದರೆ, ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಬೇಕಾದ ಅರ್ಹತೆ, ಅರ್ಜಿದಾರರ ವಯಸ್ಸು 18 ವರ್ಷದಿಂದ 75 ವರ್ಷಗಳ ನಡುವೆ ಇರಬೇಕು. ಕೃಷಿ ಮಾಡುವವರೇ ಭೂಮಿಯ ಮಾಲೀಕರು, ರೈತರು ಆಗಿರಬೇಕು. ಹಾಗೆಯೇ ಗುಂಪಿನ ಸದಸ್ಯರು ಸಹ ಆಗಿರಬೇಕು. ಗುಂಪಲ್ಲಿ ಮಾಲೀಕರು ಮತ್ತು ರೈತರು ಇರಬೇಕು. ಸೆಲ್ಫ್ ಹೆಲ್ಪ್ ಗ್ರೂಪ್ (ಎಸ್‌ಎಚ್‌ಜಿ) ಅಥವಾ ಜಾಯಿಂಟ್ ಲಯಿಬಿಲೆಟಿ ಗ್ರೂಪ್ (ಜೆಎಲ್‌ಜಿ) ರೈತರನ್ನು ಹೊಂದಿರಬೇಕು. ಈ ಕಾರ್ಡ್ ಅನ್ನು ರೈತರು, ಪಶುಸಂಗೋಪನೆ ಮತ್ತು ಮೀನುಗಾರಿಕೆಗೆ ಸಂಬಂಧಿಸಿದ ಯಾವುದೇ ವ್ಯಕ್ತಿ ಪಡೆಯಬಹುದು.
ಕಿಸಾನ್ ಕಾರ್ಡ್‌ಗೆ ಅಗತ್ಯವಿರುವ ದಾಖಲೆಗಳೆಂದರೆ, ಗುರುತಿನ ಚೀಟಿಯಾದಂತಹ ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ, ಆಧಾರ್ ಕಾರ್ಡ್. ಅದೆ ರೀತಿ, ವಿಳಾಸ ಪುರಾವೆಯಾಗಿ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ನೀಡಬೇಕು. ರೈತರು ಸಾಗುವಳಿ ಮಾಡುವ ಜಮೀನಿನ ದಾಖಲೆ. ಅರ್ಜಿದಾರರ ಒಂದು ಪಾಸ್‌ಪೋರ್ಟ್ ಗಾತ್ರದ ಫೋಟೊ. ಬ್ಯಾಂಕ್ ದಾಖಲೆಯಂತಹ ಇತರೆ ಪ್ರಮುಖ ದಾಖಲೆ. ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿ ಇರಬೇಕು.
ಕೆಸಿಸಿಗೆ ಅರ್ಜಿ ಸಲ್ಲಿಕೆಯ ಹಂತಗಳು ಇಲ್ಲಿವೆ ನೋಡಿ.
ಹಂತ 1: ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಬ್ಯಾಂಕ್‌ನ ವೆಬ್‌ಸೈಟ್‌ಗೆ ಭೇಟಿ ನೀಡಿ
ಹಂತ 2: ಕಿಸಾನ್ ಕ್ರೆಡಿಟ್ ಕಾರ್ಡ್ ಆಯ್ಕೆಯನ್ನು ಮಾಡಿಕೊಳ್ಳಿರಿ.
ಹಂತ 3: ಅರ್ಜಿ ಸಲ್ಲಿಸುವ ಪೇಜ್‌ಗೆ ರಿಡೈರೆಕ್ಟ್ ಆಗಲಿದೆ, ಅಲ್ಲಿ Apply ಎಂಬ ಆಯ್ಕೆ ಮಾಡಿ.
ಹಂತ 4: ನಂತರ ಬೇಕಾದ ದಾಖಲೆಗಳನ್ನು ಭರ್ತಿ ಮಾಡಿ, Submit ಕ್ಲಿಕ್ ಮಾಡಿರಿ.
ಹಂತ 5: ಅರ್ಜಿ ಸಲ್ಲಿಕೆಯಾದ ಬಳಿಕ ರೆಫೆರೆನ್ಸ್ ಸಂಖ್ಯೆ ಸಿಗಲಿದೆ.
ಹಂತ 6: ಇತರೆ ಪ್ರಕ್ರಿಯೆಗಾಗಿ ಬ್ಯಾಂಕ್ ನಿಮ್ಮನ್ನು ಸಂಪರ್ಕಿಸಲಿದೆ.
