Home » ಪೇಪರ್ ಹಾಕೋ ಹುಡುಗನಿಗೆ ಬಸ್ ಡಿಕ್ಕಿ, ಯುವಕ ಸ್ಥಳದಲ್ಲೇ ಸಾವು

ಪೇಪರ್ ಹಾಕೋ ಹುಡುಗನಿಗೆ ಬಸ್ ಡಿಕ್ಕಿ, ಯುವಕ ಸ್ಥಳದಲ್ಲೇ ಸಾವು

0 comments

ಸಾಗರ : ಪೇಪರ್ ಹಂಚಲು ಬರುತ್ತಿದ್ದ ಯುವಕನಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಪ್ರವಾಸಿ ಮಂದಿರದ ಎದುರು ಇಂದು ಮುಂಜಾನೆ ನಡೆದಿದೆ.

ಮೃತ ಯುವಕ ಬೆಳಲಮಕ್ಕಿಯ ಸುರೇಶ್ ಮತ್ತು ಉಮ ಅವರ ಪುತ್ರ ಗಣೇಶ್(20).

ಗಣೇಶ್ ಶನಿವಾರ ಬೆಳಿಗ್ಗೆ 5:15 ರ ಸುಮಾರಿಗೆ ಮನೆಯಿಂದ ಸೈಕಲ್ ತೆಗೆದುಕೊಂಡು ಪೇಪರ್ ಹಂಚಲು ಬರುತ್ತಿದ್ದರು. ಈ ಸಂದರ್ಭದಲ್ಲಿ ಪ್ರವಾಸಿ ಮಂದಿರದ ಎದುರು ಬೆಂಗಳೂರಿನಿಂದ ಯಲ್ಲಾಪುರಕ್ಕೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಿಂದಿನಿಂದ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಸೈಕಲ್ ಸಂಪೂರ್ಣ ನಜ್ಜುಗುಜ್ಜಾಗಿ, ಸೈಕಲ್‌ನ ಮುಂದಿನ ಚಕ್ರವೇ ಬೇರ್ಪಟ್ಟಿದೆ. ಗಣೇಶನ ಜೊತೆ ಇನ್ನೊಂದು ಸೈಕಲ್‌ನಲ್ಲಿ ಪೇಪರ್ ಹಂಚಲು ಬರುತ್ತಿದ್ದ ಇನ್ನೋರ್ವ ಯುವಕ ಕೆಸರಿನಲ್ಲಿ ಹೋಗಿ ಬಿದ್ದಿದ್ದರಿಂದ ಯಾವುದೇ ಅಪಾಯವಾಗಿಲ್ಲ.

ಕಳೆದ ಹತ್ತು ವರ್ಷಗಳಿಂದ ಗಣೇಶ್ ರಾಜ್ಯಮಟ್ಟದ ಪತ್ರಿಕೆಗಳನ್ನು ವಿತರಣೆ ಮಾಡುತ್ತಿದ್ದು, ಅತ್ಯಂತ ನಿಷ್ಠೆಯಿಂದ ಪತ್ರಿಕೆ ವಿತರಣೆ ಮಾಡುತ್ತಿದ್ದ ಗಣೇಶ್ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದ್ದ ಯುವಕನಾಗಿದ್ದನು. ಕೂಲಿಕಾರ ಕುಟುಂಬದ ಗಣೇಶ್ ತಂದೆ ಅನಾರೋಗ್ಯಪೀಡಿತರಾಗಿದ್ದರೆ, ಇಬ್ಬರು ಸಹೋದರಿಯರಿಗೆ ವಿವಾಹವಾಗಿದೆ. ಗಣೇಶ್ ಉತ್ತಮವಾಗಿ ಕೃಷಿ ಕೆಲಸದಲ್ಲೂ ನಿರತನಾಗಿದ್ದ.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

You may also like

Leave a Comment