karnataka’s gruha Jyoti scheme: ಇವತ್ತು ಹೊಸ ಬೆಳಗು. ಮಳೆಯ ನಡುವೆಯೂ ಮೋಡ ಕವಿದ ವಾತಾವರಣಗಳ ನಂತರ ಕೂಡ ಇವತ್ತು ಕರ್ನಾಟಕ ಜಗ ಮಗ ಬೆಳಗುತ್ತಿದೆ. ಕಾರಣ ಚುನಾವಣೆಯ ಸಂದರ್ಭ ಕಾಂಗ್ರೆಸ್ ಪಕ್ಷ ನೀಡಿದ ಎರಡನೇ ಮತ್ತು ಮೂರನೇ ಗ್ಯಾರಂಟಿ ನೀಡಲು ಮುಹೂರ್ತ. ಕಾಂಗ್ರೆಸ್ ಪಕ್ಷ ನೀಡಿದ ಎಲ್ಲಾ ಗ್ಯಾರೆಂಟಿಗಳು ಮಹಿಳಾ ಜನತೆಯ ಓಲೈಕೆಗೆ ಹೊರಟ ಕಾರಣದಿಂದ ಕರ್ನಾಟಕದ ಮಹಿಳೆಯರು ಸಹಜವಾಗಿ ಇಂದು ಮುಂಜಾನೆ ಬೇಗನೆ ಎದ್ದಿದ್ದಾರೆ. ತಲೆ ಸ್ನಾನ ಮುಗಿಸಿ, ದೇವರಿಗೆ ಹೂವಿಟ್ಟು, ಅದರಲ್ಲೆ ಒಂದಷ್ಟು ಪ್ರಸಾದಕ್ಕೆಂದು ತಲೆಗೆ ಮುಡಿದು ಮೆಸ್ಕಾಂ ಬೆಸ್ಕಾಂ ಚೆಸ್ಕಾಂ ಇತ್ಯಾದಿಗಳ ಮೀಟರ್ ಗಳಿಗೆ ಅಗರಬತ್ತಿಯ ಪರಿಮಳ ತೋರಿಸಿ ಆಗಿದೆ. ನಿನ್ನೆ ಮಧ್ಯ ರಾತ್ರಿಯ ಹೊತ್ತಿಗೆ ಕರ್ನಾಟಕ ರಾಜ್ಯ ವಿದ್ಯುತ್ ಶಕ್ತಿ ಮಂಡಳಿಯ ಮೀಟರ್ ಸ್ತಬ್ದವಾಗಿದೆ. ಅದು ಇನ್ನೂ ಯಾಂತ್ರಿಕವಾಗಿ ಓಡುತ್ತಾ ಇದ್ದರೂ ಅದರಲ್ಲಿ ಎಂದಿನ ಪವರ್ ಇಲ್ಲ. ಏಕೆಂದರೆ ನಿನ್ನೆ ರಾತ್ರಿ ಮಧ್ಯ ರಾತ್ರಿಯಿಂದ ಕರ್ನಾಟಕದ ಬಹುಪಾಲು ಗೃಹಿಣಿಯರ ಮನೆ ಬೆಳಗಿದರೂ, ಇನ್ಮುಂದೆ ಶೂನ್ಯ ಬಿಲ್ ಬರಲಿದೆ.
ಕಳೆದ ಜೂನ್ 11ರಿಂದ ಉಚಿತ ಬಸ್ಸುಗಳಲ್ಲಿ ಪ್ರಯಾಣಿಸಿ ಇಷ್ಟದ ದೇವರ ಬಳಿ ಒಂದೆರಡು ಟ್ರಿಪ್ ಮುಗಿಸಿ ಈಗ ಧನಿವಾರಿಸಿಕೊಳ್ಳುತ್ತಿರುವ ರಾಜ್ಯದ ಮಹಿಳೆಯರಿಗೆ ಇವತ್ತು, ಶನಿವಾರದಿಂದ ಶುಕ್ರದೆಸೆ ಆರಂಭ. ಇವತ್ತಿನಿಂದ ಕರೆಂಟ್ ಬಿಲ್ ಫ್ರೀ (karnataka’s gruha Jyoti scheme). ಜತೆಗೆ ಇವತ್ತಿನಿಂದ ಉಚಿತ ಅಕ್ಕಿ ಜತೆಗೆ ಉಳಿದ ಬಾಕಿ 5 ಕೆಜಿ ಅಕ್ಕಿಯ ಪರವಾಗಿ ಪ್ರತಿ ಕೆಜಿಗೆ 34 ರೂಪಾಯಿ ದೊರೆಯಲಿದೆ. ಅಂದರೆ ಮನೆಯ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿಯ ಬದಲಿಗೆ 170 ರೂಪಾಯಿ ದೊರೆಯಲಿದೆ. ಅದೇ ಒಂದು ವೇಳೆ ಒಂದು ಮನೆಯಲ್ಲಿ 5 ಜನರಿದ್ದರೆ, ಆ ಮನೆಗೆ ಒಟ್ಟು 850 ರೂಪಾಯಿ ದೊರೆಯಲಿದೆ. ಆದರೆ ಅಕ್ಕಿಯ ಬದಲು ದುಡ್ಡು ಸಿಗಬೇಕಾದರೆ ವ್ಯಕ್ತಿಗಳ ಬಳಿ ಬ್ಯಾಂಕ್ ಅಕೌಂಟ್ ಇರಬೇಕಾಗುತ್ತದೆ.
ಈಗಾಗಲೇ ಪ್ರತಿ ವ್ಯಕ್ತಿಗೂ ಐದು ಕೆಜಿ ಅಕ್ಕಿ ನೀಡುತ್ತಿದೆ ಸರ್ಕಾರ. ಈ 5 ಕೆ.ಜಿ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿದ್ದರು ಕರ್ನಾಟಕ ರಾಜ್ಯ ಸರ್ಕಾರ ತಾಗಲಿ ಅದನ್ನು ನೀಡುತ್ತೇನೆ. ನೀಡುತ್ತಿದ್ದೇವೆ ಎಂದು ಪ್ರಚಾರ ಮಾಡುತ್ತಿದೆ ಅದೇನೇ ಇರಲಿ, ಒಟ್ಟಾರೆ ಜನರಿಗೆ 5 ಕೆಜಿ ಅಕ್ಕಿ ಸಿಗುತ್ತಿರುವುದು ಮಾತ್ರ ಸತ್ಯ. ಇನ್ನು ಉಳಿದ ಐದು ಕೆಜಿ ಬದಲು ದುಡ್ಡು ದೊರೆಯಲಿದ್ದು ಜುಲೈನಲ್ಲಿ ಪ್ರತಿ ಐದು ಜನರ ಮನೆಗೆ 850 ರೂಪಾಯಿ ದೊರೆಯಲಿದೆ.
ಅಷ್ಟೇ ಅಲ್ಲ, ಬರುವ ತಿಂಗಳು ಆಗಸ್ಟ್ 1 ನೆಯ ತಾರೀಕಿನಿಂದ ಮಹಿಳೆಯರ ಕಾನ್ಫಿಡೆನ್ಸ್ ಇಮ್ಮಡಿಯಾಗಲಿದೆ. ಆಗಸ್ಟ್ ತಿಂಗಳಿಂದ ಶುರುವಾಗಿ, ನಂತರ ಪ್ರತಿ ತಿಂಗಳೂ ನಮ್ಮಮನೆಯ ಅದೃಷ್ಟ ಲಕ್ಷ್ಮಿಯರಿಗೆ ‘ ಗೃಹ ಲಕ್ಷ್ಮೀ ‘ ಆಗುವ ಸಂಭ್ರಮ. ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಪ್ರತಿ ಬಡ ಮನೆಯ ಒಡತಿಗೂ 2,000 ರೂಪಾಯಿ ದೊರೆಯಲಿದ್ದು ಕೆಳ ಮಧ್ಯಮ ವರ್ಗದ, ಆದಾಯ ತೆರಿಗೆಯ ವ್ಯಾಪ್ತಿಗೆ ಬರದ ಮಹಿಳಾಮಣಿಗಳಲ್ಲಿ ಎಂದಿಲ್ಲದ ಸಂತಸ ಹೆಚ್ಚಿಸಿದೆ.
