Militants: ಬೆಂಗಳೂರು ಸೇರಿ ರಾಜ್ಯದಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರರು (Militants) ಶಸ್ತ್ರಾಸ್ತ್ರ ಸ್ವೀಕರಿಸುವಾಗ ಆಣೆ ಪ್ರಮಾಣ ಮಾಡಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.
ಬೆಂಗಳೂರಿನ ಎನ್‌ಐಎ ಅಧಿಕಾರಿಗಳು ಸಿಸಿಬಿ ಪೊಲೀಸರು ಬಂಧಿಸಿರುವ ಐವರು ಶಂಕಿತರ ಪ್ರಾಥಮಿಕ ವಿಚಾರಣೆ ನಡೆಸಿ ಇಡೀ ವರದಿಯನ್ನು ದೆಹಲಿಯಲ್ಲಿರುವ ಕೇಂದ್ರ ಕಚೇರಿಗೆ ರವಾನೆ ಮಾಡಿದ್ದು,ಶಂಕಿತ ಉಗ್ರರು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕ ಸಂಘಟನೆಯಲ್ಲಿ ಸಕ್ರಿಯವಾಗಿರುವುದು ಪತ್ತೆಯಾಗಿದೆ. ನಾಜೀರ್ ಎಂಬಾತನಿಂದ ಪ್ರಚೋದನೆಗೊಂಡು ಉಗ್ರ ಸಂಘಟನೆ ಸೇರಿದ ಶಂಕಿತರು, ಶಸ್ತ್ರಾಸ್ತ್ರ ಸ್ವೀಕರಿಸುವಾಗ ಆಣೆ ಪ್ರಮಾಣ ಮಾಡಿದ್ದರು ಎಂಬ ಅಂಶ ಬಹಿರಂಗವಾಗಿದೆ.
ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಅಪರಾಧಿ ನಾಜೀರ್ ಪ್ರಚೋದನೆ ಮೇರೆಗೆ ಅರಬ್ ರಾಷ್ಟ್ರದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಉಗ್ರ ಸಂಘಟನೆ ಸದಸ್ಯರನ್ನು ಸಂಪರ್ಕಿಸಿದ್ದಾನೆ. ಅಲ್ಲದೆ, ಅವರಿಂದ ಲಕ್ಷಾಂತರ ರೂ. ಪಡೆದುಕೊಂಡು ತನ್ನ ಸಹಚರರಿಗೆ ಹಂಚಿದ್ದಾನೆ. ವಿದೇಶದಿಂದಲೇ ಜುನೈದ್‌ಗೆ ಹಣ ಸಂದಾಯವಾಗಿರುವ ಮಾಹಿತಿ ಸಿಕ್ಕಿದೆ.
ಜತೆಗೆ ಎಲ್‌ಇಟಿ ಉಗ್ರರು ಕೂಡ ಜುನೈದ್ ಹಾಗೂ ಇತರೆ ಶಂಕಿತರಿಗೆ ಕೆಲ ಟಾಸ್ಕ್ ಗಳನ್ನು ನೀಡಿದ್ದರು. ಅದರ ಪ್ರಕಾರ ಎಲ್ಲರೂ ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಬೆಂಗಳೂರು, ಬೆಳಗಾವಿ, ಮೈಸೂರು ಹಾಗೂ ಮಂಗಳೂರಿನ ಕೆಲ ಭಾಗಗಳನ್ನು ಶಂಕಿತರು ಟಾರ್ಗೆಟ್ ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದರು ಎಂಬುದು ಪತ್ತೆಯಾಗಿದೆ. ಈ ಎಲ್ಲ ಅಂಶಗಳನ್ನು ಇಟ್ಟುಕೊಂಡು ಬೆಂಗಳೂರಿನ ಎನ್‌ಐಎ ಅಧಿಕಾರಿಗಳು ಕೇಂದ್ರ ಕಚೇರಿಗೆ ವರದಿ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ವರದಿಯನ್ನು ಎನ್‌ಐಎ ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಲಿದ್ದು, ಆ ಬಳಿಕ ಸಚಿವಾಲಯದ ಸೂಚನೆ ಮೇರೆಗೆ ತನಿಖೆ ಆರಂಭಿಸಲಿದೆ.
ಸಿಸಿಬಿ ಪೊಲೀಸರು ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ(ಯುಎಪಿಎ) ಅಡಿ ಪ್ರಕರಣ ದಾಖಲಿಸಿಕೊಂಡಿರುವುದರಿಂದ ಎನ್‌ಐಎ ಮುಂದಿನ ತನಿಖೆ ನಡೆಸಲಿದೆ. ಈ ಮಧ್ಯೆ ಸಿಸಿಬಿಯ ಹಿರಿಯ ಅಧಿಕಾರಿಗಳು ದೆಹಲಿಗೆ ತೆರಳಿದ್ದು, ಪರಾರಿಯಾಗಿರುವ ಸಲ್ಮಾನ್ ಹಾಗೂ ಜುನೈದ್ ಪತ್ತೆಗಾಗಿ ಕೇಂದ್ರದ ತನಿಖಾ ಸಂಸ್ಥೆಗಳ ನೆರವು ಕೋರಿದ್ದಾರೆ.
ನಾಜೀರ್‌ನಿಂದ ಪ್ರಚೋದನೆಗೊಂಡ ಉಗ್ರ ಸಂಘಟನೆ ಸೇರಿದ ಶಂಕಿತರು, ಶಸ್ತ್ರಾಸ್ತ್ರಗಳನ್ನು ಪಡೆಯುವಾಗ ಆಣೆ ಪ್ರಮಾಣ ಮಾಡಿದ್ದರು ಎಂಬುದು ತಿಳಿದು ಬಂದಿದೆ.
ಆತನ ಅಣತಿಯಿಂದ ಗ್ರೇನೇಡ್ ಮತ್ತು ಶಸ್ತ್ರಾಸ್ತ್ರಗಳನ್ನು ಪಡೆಯುವ ಮೊದಲು ನಾಜೀರ್ ಮತ್ತು ಜುನೈದ್ ಬಂಧಿತ ಐವರು ಶಂಕಿತರಿಂದ ಈ ವಿಚಾರವನ್ನು ಯಾರೊಂದಿಗೂ ಹೇಳಿಕೊಳ್ಳುವುದಿಲ್ಲ. ತಾವು ಕಳುಹಿಸಿದ ಪಾರ್ಸ್‌ಲ್ ಅನ್ನು ಹೇಳುವವರೆಗೂ ತೆರೆಯುವುದಿಲ್ಲ ಎಂದು ಆಣೆ ಮಾಡಿಸಿಕೊಂಡಿದ್ದರು ಎಂಬುದು ಗೊತ್ತಾಗಿದೆ. ಅಂದರೆ ಕಸಮ್ ಎ ಬಾತ್ ಕಿಸ್ಕೋಬಿ ನಹಿ ಬೋಲ್ತಾ ಎಂದು ಆಣೆ ಮಾಡಿಸಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಇನ್ನು ಪೋಕ್ಸೋ ಪ್ರಕರಣದ ಆರೋಪಿ ಸಲ್ಮಾನ್ ಎಂಬಾತ ನಾಜೀರ್ ಸೂಚನೆ ಮೇರೆಗೆ ಜಾಹೀದ್ ತಬ್ರೇಜ್‌ಗೆ ಉತ್ತರ ಪ್ರದೇಶ ಮೂಲದ ವ್ಯಕ್ತಿಯಿಂದ ಗ್ರೇನೇಡ್ ತಂದು ಕೊಟ್ಟಿದ್ದ. ಸದ್ಯ ಸಲ್ಮಾನ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ.
ಇದನ್ನೂ ಓದಿ: Karnataka DCET 2023: ಡಿಪ್ಲೊಮ ಸಿಇಟಿ 2023 ಕ್ಕೆ ಅರ್ಜಿ ಆಹ್ವಾನ: ‘ಕೆಇಎ’ ಯಿಂದ ಮಹತ್ವದ ಪ್ರಕಟಣೆ
