ಉಡುಪಿ : ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಗುಂಡ್ಯಡ್ಕ ಎಂಬಲ್ಲಿ ಕಲ್ಲಿನ ಕೋರೆಯಲ್ಲಿ ಕಾರ್ಮಿಕನೋರ್ವ ತಲೆಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಬಾಗಲಕೋಟೆ ಮೂಲದ ಕಾರ್ಮಿಕ ವೆಂಕಟೇಶ್(32 ವ.) ಮೃತಪಟ್ಟವರು.
ನಿಟ್ಟೆ ಗುಂಡ್ಯಡ್ಕದ ಮಹಾಗಣಪತಿ ಸ್ಟೋನ್ ಕ್ರಶರ್ ಘಟಕದಲ್ಲಿ ಮಂಗಳವಾರ ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ಈ ಘಟನೆ ನಡೆದಿದ್ದು ವೆಂಕಟೇಶ್ ಕಲ್ಲುಕೋರೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಬ್ಲಾಸ್ಟಿಂಗ್ ನಿಂದ ಸಿಡಿದ ಕಲ್ಲು ಬಡಿದು ಗಂಭೀರವಾಗಿ ಗಾಯಗೊಂಡಿದ್ದರು ಎನ್ನಲಾಗಿದೆ.
ವೆಂಕಟೇಶ್ ಸಾವಿನ ನಿಖರ ಕಾರಣದ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ಮೂಲಗಳ ಪ್ರಕಾರ ಮೇಲ್ನೋಟಕ್ಕೆ ಸ್ಪೋಟದಿಂದ ಆತ ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ವೆಂಕಟೇಶ್ ಸಾವಿಗೆ ಸ್ಪೋಟವೇ ಕಾರಣವಾಗಿದ್ದರೆ ಆ ಕೋರೆಗೆ ಗಣಿಗಾರಿಕೆ ಹಾಗೂ ಬ್ಲಾಸ್ಟಿಂಗ್ ಲೈಸನ್ಸ್ ಇದೆಯೇ ಎನ್ನುವುದನ್ನು ಪರಿಶೀಲನೆ ನಡೆಸಲಾಗುತ್ತದೆ,ಅಲ್ಲದೇ ಸ್ಪೋಟದಿಂದ ಮೃತಪಟ್ಟಿದ್ದಾನೆಯೇ ಅಥವಾ ಇತರೇ ಕಾರಣದಿಂದ ಸಾವನ್ನಪ್ಪಿದ್ದಾನೆಯೇ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬಹಿರಂಗವಾಗಲಿದೆ.
ಆತನ ಗಣಿಗಾರಿಕೆ ನಡೆಸುವ ವೇಳೆ ಮೃತಪಟ್ಟಿದ್ದರೆ ಕಾರ್ಮಿಕರ ಸುರಕ್ಷತೆ ವಹಿಸದೇ ನಿರ್ಲಕ್ಷತನ ತೋರಿದ್ದರೆ ಗಣಿ ಮಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಕಾರ್ಕಳ ವೃತ್ತ ನಿರೀಕ್ಷಕ ನಾಗರಾಜ್.ಟಿ.ಡಿ ಸ್ಪಷ್ಟಪಡಿಸಿದ್ದಾರೆ.
