ನವದೆಹಲಿ : 5 ವರ್ಷದ ಬಾಲಕಿಯೋರ್ವಳು ಮಾವಿನ ಹಣ್ಣು ಬೇಕು ಅಂತಾ ತನ್ನ ಮಾವನಲ್ಲಿ ಕೇಳಿದ್ದಾಳೆ. ಪದೇ ಪದೇ ನನಗೆ ಬೇಕು ಮಾವ ಮಾವಿನಹಣ್ಣು ಅಂದಿದ್ದಾಳೆ. ಇಷ್ಟಕ್ಕೆ ಸಿಟ್ಟಾದ ಮಾವ ಮಾಡಿದ್ದು ಮಾತ್ರ ಅಕ್ಷಮ್ಯ ಕೃತ್ಯ. ತಿನ್ನಲು ಮಾವಿನಹಣ್ಣು ಕೇಳಿದ ತಪ್ಪಿಗೆ ಮಾವ ತನ್ನ 5 ವರ್ಷದ ಸೊಸೆಯ ಕತ್ತು ಸೀಳಿಬಿಟ್ಟಿದ್ದಾನೆ.
ಘಟನೆ ನಡೆದಿರೋದು ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಖೇಡಾ ಕುರ್ತಾನ್ ಗ್ರಾಮದಲ್ಲಿ. ಶಾಮ್ಲಿ ಜಿಲ್ಲೆಯ ಖೇಡಾ ಕುರ್ತಾನ್ ಗ್ರಾಮದ ನಿವಾಸಿ ಉಮರ್ದೀನ್ ( 33 ವರ್ಷ ) ಎಂಬಾತನೇ ಆರೋಪಿ. ಬಾಲಕಿ ಪದೇ ಪದೇ ಮಾವಿನಹಣ್ಣು ಕೇಳುತ್ತಿದ್ದಂತೆಯೇ ಆರೋಪಿ ಸಿಟ್ಟಾಗಿದ್ದಾನೆ. ಬಾಲಕಿಯ ತಲೆಗೆ ರಾಡ್ ನಿಂದ ಹೊಡೆದು ನಂತರ ಆಕೆಯ ಕತ್ತನ್ನು ಸೀಳಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕಿಯ ದೇಹವನ್ನು ಗೋಣಿ ಚೀಲದಲ್ಲಿ ತುಂಬಿಸಿ ಮನೆಯಲ್ಲಿಯೇ ಇಟ್ಟಿದ್ದಾನೆ.
ಬಾಲಕಿಯ ತಂದೆ ಕೂಲಿ ಕಾರ್ಮಿಕನಾಗಿದ್ದು, ಮಗಳು ನಾಪತ್ತೆಯಾಗಿರುವ ಕುರಿತು ಪೊಲೀಸರಿಗೆ ದೂರನ್ನು ನೀಡಿದ್ದ. ನಂತರದಲ್ಲಿ ಗ್ರಾಮಸ್ಥರ ಜೊತೆ ಸೇರಿಕೊಂಡ ಆರೋಪಿಯು ಉಮರ್ದಿನ್ ಬಾಲಕಿಯನ್ನು ಹುಡುಕುವ ನಾಟಕವಾಡಿದ್ದಾನೆ. ಆದರೆ ಪೊಲೀಸರಿಗೆ ಉಮರ್ದಿನ್ ನಡವಳಿಕೆಯ ಬಗ್ಗೆ ಅನುಮಾನ ಆಗಿತ್ತು. ಅಷ್ಟರಲ್ಲಿ ಆತ ನಾಪತ್ತೆಯಾಗಿದ್ದಾನೆ. ಕೂಡಲೇ ಅಲರ್ಟ್ ಆದ ಪೊಲೀಸರು ಆರೋಪಿ ಉಮರ್ದೀನ್‌ನನ್ನು ಗ್ರಾಮದ ಸಮೀಪದ ಅರಣ್ಯ ಪ್ರದೇಶದಿಂದ ಬಂಧಿಸಿದ್ದಾರೆ. ಅಲ್ಲದೇ ಆತನಿಂದ ಕೊಲೆಗೆ ಬಳಸಿದ್ದ ಆಯುಧ, ಚಾಕು ಮತ್ತು ಕಬ್ಬಿಣದ ರಾಡ್ ಅನ್ನು ವಶಪಡಿಸಿಕೊಂಡಿದ್ದಾರೆ.
ಸಂತ್ರಸ್ತೆಯ ತಂದೆ ನೀಡಿದ ದೂರನ್ನು ಆಧರಿಸಿ ಆರೋಪಿಯ ವಿರುದ್ದ ಎಫ್‌ಐಆರ್ ದಾಖಲಿಸಲಾಗಿದೆ. ಅವರನ್ನು ಬಂಧಿಸಿ ಕೊಲೆ ಮತ್ತು ಭಾರತೀಯ ದಂಡ ಸಂಹಿತೆಯ ಇತರ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಿ ಜೈಲಿಗೆ ಅಟ್ಟಲಾಗಿದೆ.
