Mangalore Crime: ಮೂಲ್ಕಿ ನಿವಾಸಿಯಾಗಿರುವ ಆಸಿಫ್ ಅನಾಥ ರೋಗಿಗಳಿಗೆ ಸಹಾಯ ಹಸ್ತ ಚಾಚಿ ರೋಗಿಗಳನ್ನು ಆಂಬುಲೆನ್ಸ್ ನಲ್ಲಿ ಉಚಿತವಾಗಿ ಆಸ್ಪತ್ರೆಗೆ ಸಾಗಿಸುವ ಕೆಲಸ ಮಾಡುತ್ತಿದ್ದರು. ಇದೀಗ, ಆಸೀಫ್ ಅವರನ್ನು ಪಾಂಡೇಶ್ವರ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳೂರು(Mangalore)ನಗರದ ವೆನ್ಲಾಕ್ ಆಸ್ಪತ್ರೆಯ ಮಹಿಳಾ ಸೆಕ್ಯುರಿಟಿ ಸಿಬ್ಬಂದಿ ಮೇಲೆ ಕೈಮಾಡಿದ ಆರೋಪದ ಮೇರೆಗೆ ದೂರು ದಾಖಲಾದ ಹಿನ್ನೆಲೆ ಆಸಿಫ್ ಅವರನ್ನು ಪೊಲೀಸರು ಪ್ರಕರಣದ ದಾಖಲಿಸಿಕೊಂಡು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಆಸಿಫ್ ಅವರು ಬುಧವಾರ ಸಂಜೆ ವೆನ್ಲಾಕ್ ಆಸ್ಪತ್ರೆಗೆ ಇಬ್ಬರು ರೋಗಿಗಳನ್ನು ಕರೆದುಕೊಂಡು ಬಂದಿದ್ದಾರೆ. ಈ ಸಂದರ್ಭ ರೋಗಿಗಳನ್ನು ಒಳಗಡೆ ಕರೆದೊಯ್ದು ಅಡ್ಮಿಷನ್ ಮಾಡುತ್ತಿದ್ದ ವೇಳೆ ಸೆಕ್ಯುರಿಟಿ ವಾಹನವನ್ನು ಹೊರಗೆ ಒಯ್ಯುವಂತೆ ಸೂಚನೆ ನೀಡಿದ್ದಾರೆ. ರೋಗಿಗಳನ್ನು ಅಡ್ಮಿಷನ್ ಮಾಡುತ್ತಿದ್ದು, ಸ್ವಲ್ಪ ಹೊತ್ತು ಕಾಯುವಂತೆ ಆಸಿಫ್ ನಗರದ ವೆನ್ಲಾಕ್ ಆಸ್ಪತ್ರೆಯ ಸಿಬ್ಬಂದಿಗೆ ಹೇಳಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಹೇಳಿದರು ಕೂಡ ಆಂಬುಲೆನ್ಸ್ ತೆರವು ಮಾಡದ ಹಿನ್ನೆಲೆ ಮಹಿಳಾ ಸಿಬ್ಬಂದಿ ಆಸಿಫ್ ಅವರಿಗೆ ಗದರಿದ್ದಾರೆ.
ಈ ವೇಳೆ, ಮಹಿಳಾ ಸಿಬ್ಬಂದಿ ಮತ್ತು ಆಸೀಫ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಆಸ್ಪತ್ರೆಯ ಮಹಿಳಾ ಸಿಬ್ಬಂದಿಯನ್ನು ದೂಡಿ ಕೈಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ವೆನ್ಲಾಕ್ ಆಸ್ಪತ್ರೆಯ ಕಡೆಯಿಂದ ಪೊಲೀಸರಿಗೆ ದೂರು ನೀಡಲಾಗಿದೆ. ಹೀಗಾಗಿ, ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಕ್ಷಣವೇ ಸ್ಥಳಕ್ಕೆ ಪೊಲೀಸರು ಆಗಮಿಸಿ ಆರೋಪಿ ಆಸಿಫ್ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
