ಮಂಗಳೂರು:ಹೆಚ್ಚಿನ ಜನರು ತಮಗೆ ಏನಾದರೂ ಸಂಕಷ್ಟ ಬಂದರೆ ಜ್ಯೋತಿಷಿಗಳ ಮೊರೆ ಹೋಗುತ್ತಾರೆ. ಯಾರು, ಎತ್ತವೆಂದು ನೋಡದೆ ಪರಿಹಾರಕ್ಕಾಗಿ ಹೋಗುತ್ತಾರೆ. ಇತ್ತೀಚೆಗೆ ಅದೆಷ್ಟೋ ಜ್ಯೋತಿಷಿಗಳು ಸಿಕ್ಕಿದ್ದೇ ಚಾನ್ಸ್ ಅಂದು ಕೊಂಡು ಎಷ್ಟೋ ಜನರಿಗೆ ಪಂಗ ನಾಮ ಹಾಕಿದ್ದಾರೆ. ಅದರಲ್ಲೂ ಇಂತಹ ಮೋಸ ಹೋಗುವ ಜನರಿರುವಾಗ ಇವರ ಬುದ್ಧಿ ಎಲ್ಲಿ ಕೈ ಬಿಡುತ್ತಾರೆ ಹೇಳಿ!?
ಇದೀಗ ಅಂತಹುದೇ ಘಟನೆ ಮಂಗಳೂರಿನಲ್ಲಿ ನಡೆದಿದ್ದು,ಕಷ್ಟ ಪರಿಹಾರ ಮಾಡುವುದಾಗಿ ನಂಬಿಸಿ ಜ್ಯೋತಿಷಿ ಪೂಜೆ ಸಂದರ್ಭದಲ್ಲಿ ಕಲಶಕ್ಕೆ ಇಟ್ಟಂತಹ ಮಹಿಳೆಯೊಬ್ಬರ ಐದೂವರೆ ಪವನ್ ತೂಕದ ಮಾಂಗಲ್ಯ ಸರವನ್ನೇ ಎಗರಿಸಿದ್ದಾನೆ.
ಮಹಿಳೆಯೊಬ್ಬರು ಮನೆಯಲ್ಲಿ ಕಷ್ಟವಿದೆ ಏನಾದರೂ ಪರಿಹಾರ ಹೇಳಿ ಎಂದು ಅ.13ರಂದು ಕುಂಜತ್ ಬೈಲಿನಲ್ಲಿರುವ ಜ್ಯೋತಿಷಿ ವಿನೋದ್ ಪೂಜಾರಿ ಬಳಿಗೆ ಹೋಗಿದ್ದರು. ಈ ವೇಳೆ ಆರೋಪಿ ವಿನೋದ್ ಆ ದೋಷ, ಈ ದೋಷ ಎಂದು ಲೆಕ್ಕ ಹಾಕಿ, ದೋಷ ಕಳೆಯಲು ಪೂಜೆಯ ಸಮಯ ಕಲಶಕ್ಕೆ ಇಡಲು ಚಿನ್ನದ ಆಭರಣವನ್ನು ತರಬೇಕು ಎಂದಿದ್ದ.ಹಾಗಾಗಿ ಮಹಿಳೆ ಚಿನ್ನದ ಕರಿಮಣಿ ಸರವನ್ನು ಜ್ಯೋತಿಷಿಯ ಕೈಗೆ ನೀಡಿದ್ದರು. 15 ದಿನ ಪೂಜೆ ಮಾಡಿ ಮಾಂಗಲ್ಯವನ್ನು ವಾಪಸ್ ಕೊಡುವುದಾಗಿ ಹೇಳಿದ್ದ ಜ್ಯೋತಿಷಿ, ಆನಂತರವೂ ನೀಡದೇ ವಂಚಿಸಿದ್ದು, ಇದೀಗ ತಲೆಮರೆಸಿಕೊಂಡಿದ್ದಾನೆ ಎಂದು ವಂಚನೆಗೊಳಗಾದ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ವರದಿಯಾಗಿದೆ.
