Mayor Arya Rajendran: ಸಾಧನೆಗೆ ಹಣ, ವಯಸ್ಸು, ಯಾವುದೂ ಲೆಕ್ಕಕ್ಕೆ ಬರಲ್ಲ. ಮನಸ್ಸಿದ್ದರೆ ಕಬ್ಬಿಣ ಕರಗಿಸಿ ನುಂಗಬಹುದು ಎಂಬ ಹಿರಿಯರ ಮಾತು ಕೇಳಿರಬಹುದು. ಹಾಗೆಯೇ ಇಲ್ಲೊಬ್ಬಳು ಮಹಿಳೆ ಕೈಯಲ್ಲಿ ಮಗು ಹಿಡಿದುಕೊಂಡು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಳಂತೆ. ಬನ್ನಿ ಸಂಪೂರ್ಣ ಮಾಹಿತಿ ತಿಳಿಯೋಣ.
ಈಕೆಯ ಸಾಧನೆ ಮೆಚ್ಚುಲೇ ಬೇಕು.
ಹೆಣ್ಣು ಕಚೇರಿಗೆ ಹೋಗುವುದರ ಜೊತೆಗೇ ಕುಟುಂಬವನ್ನೂ ನಿರ್ವಹಿಸಬಲ್ಲಳು ಎಂಬುದಕ್ಕೆ ಇದು ಉತ್ತಮ ನಿದರ್ಶನ. ದೇಶದ ಅತ್ಯಂತ ಕಿರಿಯ ಮೇಯರ್ ಆಗಿರುವ ಕೇರಳದ ಮೇಯರ್ ಆರ್ಯ ರಾಜೇಂದ್ರನ್ (Mayor Arya Rajendran)ಕಚೇರಿಯಲ್ಲಿ ತಮ್ಮ ಒಂದು ತಿಂಗಳ ಮಗುವಿನೊಂದಿಗೆ ಕೆಲಸ ಮಾಡುತ್ತಿರುವ ಫೋಟೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಹೌದು, ಈಕೆ ಆಲ್ ಸೇಂಟ್ಸ್ ಕಾಲೇಜಿನಲ್ಲಿ ಓದುತ್ತಿದ್ದಾಗ 21ನೇ ವಯಸ್ಸಿನಲ್ಲಿ ತಿರುವನಂತಪುರಂ ಮೇಯರ್ ಆಗಿ ದೇಶದ ಅತ್ಯಂತ ಕಿರಿಯ ಮೇಯರ್ ಎಂದು ಗುರುತಿಸಿಕೊಂಡಿದ್ದಾರೆ. ಇನ್ನು ಆರ್ಯ ರಾಜೇಂದ್ರನ್, ಸೆಪ್ಟೆಂಬರ್ 2022ರಲ್ಲಿ ಕೇರಳ ಅಸೆಂಬ್ಲಿಯ ಕಿರಿಯ ಶಾಸಕ ಸಚಿನ್ ದೇವ್ ಅವರೊಂದಿಗೆ ವಿವಾಹವಾದರು. ಕಳೆದ ತಿಂಗಳು ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಸದ್ಯ ಮೇಯರ್ ಆರ್ಯ ರಾಜೇಂದ್ರನ್ ಅವರು ತಮ್ಮ ಚೇರ್‌ನಲ್ಲಿ ಕುಳಿತುಕೊಂಡು, ಒಂದು ಕೈಯಲ್ಲಿ ಮಗುವನ್ನು ಹಿಡಿದುಕೊಂಡು ಫೈಲ್ ಪರಿಶೀಲಿಸುತ್ತಿರುವುದು ಫೋಟೋದಲ್ಲಿ ಕಾಣಿಸುತ್ತದೆ.
ಆಗಸ್ಟ್ 10ರಂದು ಆರ್ಯ ರಾಜೇಂದ್ರನ್ ಮತ್ತು ಬಲುಸ್ಸೆರಿಯ ಶಾಸಕ ಸಚಿನ್ ದೇವ್ ದಂಪತಿಯು ಹೆಣ್ಣು ಮಗುವನ್ನು, ತಿರುವನಂತಪುರಂನ ಎಸ್‌ಎಟಿ ಆಸ್ಪತ್ರೆಯಲ್ಲಿ ಜನ್ಮ (Birth) ನೀಡಿದ್ದಾರೆ. ದಂಪತಿಗಳು ತಮ್ಮ ನವಜಾತ ಮಗಳಿಗೆ ದುವಾ ದೇವ್ ಎಂದು ಹೆಸರಿಟ್ಟಿದ್ದಾರೆ.
ವಿಶೇಷ ಎಂದರೆ ಆರ್ಯ ಅವರು ದೇಶದ ಅತ್ಯಂತ ಕಿರಿಯ ಮೇಯರ್ ಆಗಿದ್ದು, ಆಕೆಯ ಗಂಡ ಸಚಿನ್ ದೇವ್ ಅವರು 15 ನೇ ಕೇರಳ ವಿಧಾನಸಭೆಯ ಅತ್ಯಂತ ಕಿರಿಯ ಸದಸ್ಯರಾಗಿದ್ದಾರೆ. ಅವರು ಎಸ್‌ಎಫ್‌ಐನಲ್ಲಿ ವಿದ್ಯಾರ್ಥಿಗಳಾಗಿದ್ದಾಗ ಮೊದಲ ಬಾರಿಗೆ ಭೇಟಿಯಾದರು. ಪರಸ್ಪರ ಸ್ನೇಹ ಪ್ರೀತಿಗೆ ಪರಿವರ್ತನೆಯಾದ ನಂತರ ಮದುವೆಯಾಗಲು ನಿರ್ಧರಿಸಿದರು ಎನ್ನಲಾಗಿದೆ.
