ಉಳಿತಾಯ ಒಂದು ಉತ್ತಮ ಹವ್ಯಾಸವಾಗಿದ್ದು, ಭವಿಷ್ಯದಲ್ಲಿ ಎದುರಾಗುವ ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ನೆರವಾಗುತ್ತದೆ. ಅಷ್ಟೇ ಅಲ್ಲದೆ, ವೃದ್ಧಾಪ್ಯದಲ್ಲಿ ಹಣಕಾಸಿನ ಅಗತ್ಯತೆಯನ್ನು ಪೂರೈಸಲು ಕೂಡ ಉಳಿತಾಯ ನೆರವಾಗುತ್ತದೆ. ಸಾಮಾನ್ಯವಾಗಿ ಪ್ರತಿಯೊಬ್ಬರು ಯಾವುದಾದರೂ ಒಂದು ಕ್ಷೇತ್ರದಲ್ಲಿ ಉಳಿತಾಯ ಮಾಡೋದು ಸಹಜ. ಬ್ಯಾಂಕ್, ಪೋಸ್ಟ್ ಆಫೀಸ್, ಇನ್ಸೂರೆನ್ಸ್ ಕಂಪನಿಗಳಲ್ಲಿ ಇಲ್ಲವೇ ಇನ್ನಿತರ ಹಣಕಾಸಿನ ವ್ಯವಹಾರಗಳಲ್ಲಿ ಠೇವಣಿ ಇಟ್ಟು ನಿಶ್ಚಿತ ಲಾಭ ಪಡೆಯಲು ಸಾಧ್ಯವಾಗುತ್ತದೆ. ಅದರಲ್ಲಿಯೂ ಕೂಡ ರಿಸ್ಕ್ ತೆಗೆದುಕೊಳ್ಳಲು ಬಯಸುವವರು ಶೇರ್ ಮಾರ್ಕೆಟ್ ಗಳಲ್ಲಿ ಹೂಡಿಕೆ ಮಾಡುತ್ತಾರೆ.
ಕೆಲವರು ಹೂಡಿಕೆ ಮಾಡಬೇಕು ಎಂದುಕೊಂಡರು ಯಾವುದರಲ್ಲಿ ಹೆಚ್ಚಿನ ನಿಶ್ಚಿತ ಲಾಭ ಪಡೆಯಬಹುದು ಎಂಬ ಗೊಂದಲದಲ್ಲಿ ಹೂಡಿಕೆ ಮಾಡದೇ ಹಾಗೆ ಉಳಿದುಬಿಡುತ್ತಾರೆ. ಯಾವುದೇ ರಿಸ್ಕ್ ತೆಗೆದುಕೊಳ್ಳದೆ ಸುರಕ್ಷಿತವಾಗಿ ಸುಲಭವಾಗಿ ಹೂಡಿಕೆ ಮಾಡುವ ಯೋಜನೆಗಳ ಕುರಿತ ಮಾಹಿತಿ ಇಲ್ಲಿದೆ.
ಅಂಚೆ ಕಚೇರಿ ಇಲ್ಲವೇ ಪೋಸ್ಟ್ ಆಫೀಸ್ ನಲ್ಲಿ ಸುರಕ್ಷಿತವಾಗಿ ಹೂಡಿಕೆ ಮಾಡಬಹುದಾಗಿದ್ದು,ಇದರಲ್ಲಿಯೂ ನಿಮಗೆ ಅನೇಕ ಆಯ್ಕೆಗಳು ಲಭ್ಯವಾಗುತ್ತವೆ. ಪೋಸ್ಟ್ ಆಫೀಸ್ ನಂಬಿಕಾರ್ಹ ಹೂಡಿಕೆಯಾಗಿದ್ದು, ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರು ಕೂಡ ಇಲ್ಲಿ ಹೂಡಿಕೆ ಮಾಡಿ ನಿಶ್ಚಿತ ಠೇವಣಿಯ ಪ್ರಯೋಜನ ಪಡೆಯಬಹುದಾಗಿದೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2023 ರ ಅನುಸಾರ, ಜನಪ್ರಿಯ ಅಂಚೆ ಕಚೇರಿ ಯೋಜನೆಗಳಲ್ಲಿ ಬದಲಾವಣೆ ಮಾಡಲಾಗಿದೆ. ಹಣ ಉಳಿತಾಯವನ್ನು ಜನರಲ್ಲಿ ಉತ್ತೇಜಿಸುವ ಉದ್ದೇಶದಿಂದ ಪೊಸ್ಟ್ ಆಫೀಸ್ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಹೆಚ್ಚಿನ ಬಡ್ಡಿದರ ಮತ್ತು ತೆರಿಗೆ ವಿನಾಯಿತಿಯ ಅವಕಾಶವನ್ನು ನೀಡಲಾಗಿದೆ. ಈ ಯೋಜನೆಯು ಜನರು ಆರ್ಥಿಕವಾಗಿ ಸ್ಥಿರತೆ ಮತ್ತು ಸದೃಢರಾಗಲು ಸಹಾಯ ಮಾಡುತ್ತದೆ.
ಸಾಮಾನ್ಯವಾಗಿ ಉಳಿತಾಯ ಮತ್ತು ಹೂಡಿಕೆಯ ಅಭ್ಯಾಸ ಬೆಳೆಸುವ ನಿಟ್ಟಿನಲ್ಲಿ ಹೂಡಿಕೆಗಳು ನೆರವಾಗುತ್ತವೆ. ಅಂಚೆ ಕಚೇರಿಯ ಪ್ರಮುಖ ಯೋಜನೆಗಳಲ್ಲಿ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಅಥವಾ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್‌ಎಸ್‌ಸಿ) ಒಂದಾಗಿದ್ದು, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಯೋಜನೆಯು ಉಳಿತಾಯಕ್ಕೆ ಉತ್ತಮ ಮಾರ್ಗವಾಗಿದೆ. ಈ ಯೋಜನೆಯಲ್ಲಿ ವ್ಯಕ್ತಿಗಳಿಗೆ ಉಳಿತಾಯದ ಜತೆಗೆ ತೆರಿಗೆ ವಿನಾಯಿತಿ ಸೌಲಭ್ಯ ಕೂಡ ಲಭ್ಯವಾಗುತ್ತದೆ. ಇದಲ್ಲದೆ, ಬೇರೆ ಉಳಿತಾಯ ಯೋಜನೆಗಳಿಗೆ ಹೋಲಿಸಿದರೆ, ಇದು ಅತ್ಯಂತ ಕಡಿಮೆ ಅಪಾಯ (ರಿಸ್ಕ್) ಹೊಂದಿದ್ದು, ಸ್ಥಿರ ಆದಾಯ ನೀಡುತ್ತದೆ. NSC ಅನ್ನು ಒಂದು ನಿರ್ದಿಷ್ಟ ಅವಧಿಯ ಹೂಡಿಕೆ ಯೋಜನೆಯಾಗಿ ವರ್ಗೀಕರಿಸಲಾಗಿದೆ. ಇದು ಸಣ್ಣ ಉಳಿತಾಯ ಯೋಜನೆಯಾಗಿದ್ದು,ಇದರ ಒಟ್ಟು ಹೂಡಿಕೆ ಅವಧಿ 5 ವರ್ಷವಾಗಿದೆ. ಶೇಕಡ 7.00ಯಷ್ಟು ರಿಟರ್ನ್ ಅನ್ನು ಲಭ್ಯವಾಗುತ್ತದೆ. ಇದರಲ್ಲಿ ನೀವು 100 ರೂಪಾಯಿಯಿಂದ 1000 ರೂಪಾಯಿವರೆಗೆ ಹೂಡಿಕೆ ಮಾಡಬಹುದು.
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (ಎಂಐಎಸ್) ಈ ಯೋಜನೆಯ ಮೂಲಕ ಅಧಿಕ ಮೊತ್ತವನ್ನು ಹೂಡಿಕೆ ಮಾಡಿ, ಮಾಸಿಕವಾಗಿ ಆದಾಯ ಪಡೆಯಬಹುದು. ಈ ಯೋಜನೆ ಪ್ರತಿ ತಿಂಗಳು ಗ್ರಾಹಕರು ನಿಗದಿತ ಆದಾಯವನ್ನು ಪಡೆಯಲು ನೆರವಾಗುತ್ತವೆ. ಕೇಂದ್ರ ಬಜೆಟ್ 2023ರಲ್ಲಿ ಈ ಯೋಜನೆಯ ಹೂಡಿಕೆ ಮೊತ್ತವನ್ನು ಸಿಂಗಲ್ ಅಕೌಂಟ್ 9 ಲಕ್ಷ ರೂಪಾಯಿ, ಜಾಯಿಂಟ್ ಅಕೌಂಟ್ 15 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಿದೆ. ಬಡ್ಡಿದರ ಸ್ಥಿರವಾಗಿದ್ದು ಶೇಕಡ 7.10 ಆಗಿದೆ.
ಅಂಚೆ ಇಲಾಖೆಯಲ್ಲಿ ಅನೇಕ ಸಣ್ಣ ಉಳಿತಾಯ ಯೋಜನೆಗಳಿವೆ. ಅವುಗಳಲ್ಲಿ ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಕೂಡ ಒಂದಾಗಿದ್ದು, ಕಿಸಾನ್ ವಿಕಾಸ್ ಪತ್ರ ಯೋಜನೆಯು ಕೂಡಾ ಅಂಚೆ ಕಚೇರಿ ಹೂಡಿಕೆಯಾಗಿದ್ದು, ಈ ಯೋಜನೆ ಮೆಚ್ಯುರಿಟಿ ಅವಧಿ 10 ವರ್ಷ 4 ತಿಂಗಳಾಗಿದ್ದು, ಮೆಚ್ಯುರಿಟಿ ಅವಧಿಯಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣ ದುಪ್ಪಟ್ಟಾಗುತ್ತದೆ. ಭಾರತದ ಯಾವುದೇ ವಯಸ್ಕ ವ್ಯಕ್ತಿ ಕೆವಿಪಿಯಲ್ಲಿ ತನ್ನ ಹೆಸರಿನಲ್ಲಿ ಅಥವಾ ಅಪ್ರಾಪ್ತರ ಪರವಾಗಿ ಹೂಡಿಕೆ ಮಾಡಬಹುದು. ಮೂವರು ವಯಸ್ಕರು ಜಂಟಿಯಾಗಿ ಕೂಡ ಕೆವಿಪಿಯಲ್ಲಿ ಹೂಡಿಕೆ ಮಾಡಲು ಅವಕಾಶವಿದೆ. ಇದು ರೈತರಿಗಾಗಿ ಇರುವ ಯೋಜನೆಯಾಗಿದ್ದು, ಇಲ್ಲಿ ರೈತರು ಮಾಡಿದ ಹೂಡಿಕೆಗೆ ಶೇಕಡ 7.2ರಷ್ಟು ರಿಟರ್ನ್ ಅನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. 1000 ರೂಪಾಯಿಯಿಂದ ಹೂಡಿಕೆ ಮಾಡಲು ಅವಕಾಶವಿದೆ. ನೀವು ಮಾಡಿದ ಹೂಡಿಕೆಯು 120 ತಿಂಗಳಲ್ಲಿ ಇಮ್ಮಡಿಯಾಗುತ್ತದೆ.
ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ವಿಶೇಷ ನಿವೃತ್ತಿ ಖಾತೆಯಾಗಿದ್ದು, ಇದು ಭಾರತದಲ್ಲಿ ವಾಸಿಸುವ ಹಿರಿಯ ನಾಗರಿಕರಿಗೆ ತಮ್ಮ ಮಾಸಿಕ ಆದಾಯದಿಂದ ನಿಯಮಿತವಾಗಿ ಹಣವನ್ನು ಉಳಿಸಲು ಮತ್ತು ಅವರ ಅನುಕೂಲಕ್ಕೆ ತಕ್ಕಂತೆ ಹೂಡಿಕೆ ಮಾಡಲು ಅವಕಾಶವನ್ನು ನೀಡುತ್ತದೆ. ಆದಾಯ ತೆರಿಗೆ ಪ್ರಯೋಜನಗಳ ಜೊತೆಗೆ ನಿವೃತ್ತಿಯ ನಂತರದ ನಿಯಮಿತ ಆದಾಯಕ್ಕೆ ಖಾತೆಯು ಅವಕಾಶ ಕಲ್ಪಿಸುತ್ತದೆ. ಇದು ವಾರ್ಷಿಕವಾಗಿ ಶೇಕಡ 8.00ರಷ್ಟು ಬಡ್ಡಿದರವನ್ನು ನೀಡಲಿದ್ದು, ಇದರ ಹೂಡಿಕೆ ಮಿತಿಯನ್ನು ಕೇಂದ್ರ ಸರ್ಕಾರವು 15 ಲಕ್ಷ ರೂಪಾಯಿಯಿಂದ 30 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ.
ಭಾರತ ಸರ್ಕಾರವು ಪ್ರಾರಂಭಿಸಿರುವ ಉಳಿತಾಯ ಯೋಜನೆಯಾಗಿದ್ದು, ಒಬ್ಬ ವ್ಯಕ್ತಿಯು ತನ್ನ ಮಗಳು 10 ವರ್ಷ ವಯಸ್ಸನ್ನು ತಲುಪುವ ಮೊದಲು ಖಾತೆಯನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ.ಇದರ ಜೊತೆಗೆ ಕನಿಷ್ಠ ಮೊತ್ತವನ್ನು ಹೂಡಿಕೆ ಮಾಡಲು ಅನುವು ಮಾಡಿಕೊಡುತ್ತದೆ. ಹೂಡಿಕೆ ಮಾಡಬಹುದಾದ ಕನಿಷ್ಠ ಮೊತ್ತವು ರೂ 250 ಮತ್ತು ಗರಿಷ್ಠ ಮೊತ್ತ ರೂ 1.5 ಲಕ್ಷಗಳು. ಹೂಡಿಕೆಯು ವ್ಯಕ್ತಿಗಳಿಗೆ ತಮ್ಮ ಕುಟುಂಬದ ಆರ್ಥಿಕ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅವರ ಮಗಳ ಶಿಕ್ಷಣ ಅಥವಾ ಮದುವೆಗೆ ಹಣವನ್ನು ನೀಡಲು ಅನುವು ಮಾಡಿಕೊಡುತ್ತದೆ.
ಒಂದು ಕುಟುಂಬವು ಗರಿಷ್ಠ ಇಬ್ಬರು ಹೆಣ್ಣು ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಿ ಪ್ರಯೋಜನ ಪಡೆದುಕೊಳ್ಳಬಹುದು. ಅವಳಿ ಹೆಣ್ಣು ಮಕ್ಕಳನ್ನು ಹೊಂದಿರುವ ಕುಟುಂಬವು ಪ್ರತಿ ಹೆಣ್ಣು ಮಗುವಿಗೆ ಪ್ರತ್ಯೇಕವಾಗಿ ಪ್ರಧಾನ ಮಂತ್ರಿ ಕನ್ಯಾ ಯೋಜನೆ ಪ್ರಯೋಜನಗಳನ್ನು ಪಡೆಯಬಹುದು. ಈ ಯೋಜನೆಯಲ್ಲಿ ಹೂಡಿಕೆದಾರರು ಈ ಹೂಡಿಕೆಗೆ ಶೇಕಡ 7.6ರಷ್ಟು ರಿಟರ್ನ್ ಅನ್ನು ಪಡೆಯಬಹುದಾಗಿದೆ.
