Gurugram: ಖತರ್ನಾಕ್ ಆಸಾಮಿಯೋರ್ವ ಮದುವೆಯಾಗುವುದಾಗಿ ನಂಬಿಸಿ ಕಳೆದ 20 ವರ್ಷಗಳಲ್ಲಿ ಸುಮಾರು 50 ಯುವತಿಯರಿಗೆ ವಂಚಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಜೆಮ್‌ಶೆಡ್‌ಪುರ ಮೂಲದ (Jamshedpur) ತಪೇಶ್ (55) ಎನ್ನಲಾಗಿದೆ.
ತಪೇಶ್’ಗೆ ಮದುವೆಯಾಗಿ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ, ಈತ ಪತ್ನಿ ಮಕ್ಕಳನ್ನು ತೊರೆದು ಬೇರೆ ಮಹಿಳೆಯರ ಕಡೆಗೆ ವಾಲಿದ್ದಾನೆ. ಹೌದು, ವಿವಿಧ ಮ್ಯಾಟ್ರಿಮೋನಿಯಲ್ ಸೈಟ್ (Matrimonial App) ಮೂಲಕ ಯುವತಿಯರನ್ನು ಬೆಲೆಗೆ ಬೀಳಿಸಿಕೊಳ್ಳುತ್ತಿದ್ದಾನೆ. ನಂತರ ಮದುವೆ ಆಗುತ್ತೇನೆ ಎಂದು ನಂಬಿಸಿ ಯುವತಿಯರಿಂದ ಲಕ್ಷ ಲಕ್ಷ ಹಣ ಪಡೆದು ವಂಚಿಸುತ್ತಾನೆ.
ಇತ್ತೀಚೆಗೆ ಗುರುಗ್ರಾಮ್‌ನಲ್ಲಿನ (Gurugram) ಮಹಿಳೆಯೊಬ್ಬರಿಗೂ ಈತ ವಂಚಿಸಿದ್ದ. ಮಹಿಳೆಯನ್ನು ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಪರಿಚಯ ಮಾಡಿಕೊಂಡು ನಂತರ ಆಕೆಯನ್ನು ವಿವಾಹವಾಗಿ ಮೂರು ದಿನಗಳ ನಂತರ ಮಹಿಳೆಯ ಚಿನ್ನಾಭರಣ ಸೇರಿದಂತೆ 20 ಲಕ್ಷ ರೂಪಾಯಿ ದೋಚಿಕೊಂಡು ಪರಾರಿಯಾಗಿದ್ದಾನೆ. ಈ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಆರೋಪಿಯು ಕಳೆದ 20 ವರ್ಷಗಳಲ್ಲಿ 50 ಕ್ಕೂ ಹೆಚ್ಚು ಮಹಿಳೆಯರನ್ನು ಮದುವೆಯಾಗಿ ಅವರಿಂದ ಲಕ್ಷಾಂತರ ಹಣ ದೋಚಿದ್ದಾನೆ. ಈ ಮೊದಲು ಈತ ಬೆಂಗಳೂರಿನಲ್ಲಿ ‘ಸ್ಮಾರ್ಟ್ ಹೈರ್ ಸೊಲ್ಯೂಷನ್’ ಎಂಬ ಹೆಸರಿನ ಉದ್ಯೋಗ ನಿಯೋಜನೆ ಏಜೆನ್ಸಿ ತೆರೆದಿದ್ದು, ಈ ಮೂಲಕ ನಿರುದ್ಯೋಗಿಗಳಿಗೆ ಕೆಲಸ ಕೊಡಿಸುವುದಾಗಿ ಹೇಳಿ ವಂಚಿಸುತ್ತಿದ್ದ. ಸದ್ಯ ಆರೋಪಿ ತಪೇಶ್’ನನ್ನು ಪೊಲೀಸರು ಬಂದಿಸಿದ್ದಾರೆ.
