Home » ಅಯೋಧ್ಯೆಗೆ ಬಂದವು 6 ಕೋಟಿ ವರ್ಷಗಳಷ್ಟು ಹಳೆಯ ಸಾಲಿಗ್ರಾಮ ಶಿಲೆಗಳು! ನೇಪಾಳದ ಈ ಕಲ್ಲುಗಳಲ್ಲಿ ಅರಳಲಿದೆ, ರಾಮ-ಸೀತೆಯರ ಭವ್ಯ ರೂಪ!!

ಅಯೋಧ್ಯೆಗೆ ಬಂದವು 6 ಕೋಟಿ ವರ್ಷಗಳಷ್ಟು ಹಳೆಯ ಸಾಲಿಗ್ರಾಮ ಶಿಲೆಗಳು! ನೇಪಾಳದ ಈ ಕಲ್ಲುಗಳಲ್ಲಿ ಅರಳಲಿದೆ, ರಾಮ-ಸೀತೆಯರ ಭವ್ಯ ರೂಪ!!

by ಹೊಸಕನ್ನಡ
0 comments

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕೆಂಬುದು ಕೋಟ್ಯಾಂತರ ಹಿಂದೂಗಳ ಕನಸು. ಇದೀಗ ಈ ಕನಸು ನನಸಾಗುವ ಸಮಯ ಬಂದಿದ್ದು, ಭವ್ಯ ರಾಮ ಮಂದಿರದ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು ಹೆಚ್ಚಿನ ಎಲ್ಲಾ ಕೆಲಸಗಳು ಮುಗಿದಿವೆ. ಇದೀಗ ಕೋಟ್ಯಾಂತರ ಮನಸ್ಸುಗಳ ಆರಾಧ್ಯ ಮೂರ್ತಿಯಾದ ರಾಮ ಮತ್ತು ಜಾನಕಿ ದೇವಿಯ ವಿಗ್ರಹಗಳನ್ನು ಕೆತ್ತನೆ ಮಾಡಲು 2 ಅಪರೂಪದ ಸಾಲಿಗ್ರಾಮ ಶಿಲೆಗಳನ್ನು ಗುರುವಾರ ನೇಪಾಳದಿಂದ ತರಿಸಲಾಗಿದೆ. ಈ ಅಪರೂಪದ ಕಲ್ಲುಗಳ ವಿಶೇಷತೆ ಏನೆಂದು ಗೊತ್ತಿದೆಯಾ?

ಆದರ್ಶ ಪುರುಷನ ರೂಪತಾಳಲಿರುವ ಈ ಕಲ್ಲುಗಳು ಎಷ್ಟು ಪ್ರಾಚೀನ ಎಂಬುದನ್ನು ನೀವು ತಿಳಿದರೆ ಹುಬ್ಬೇರಿಸೋದು ಗ್ಯಾರಂಟಿ. ಹೌದು, ಅತ್ಯಂತ ವಿಶೇಷವಾದ ಈ ಶಿಲೆಗಳು ಬರೋಬ್ಬರಿ 6 ಕೋಟಿ ವರ್ಷದಷ್ಟು ಹಳೆಯದು! ಅಲ್ಲದೆ 2 ಶಿಲೆಗಳ ಪೈಕಿ ಒಂದು 26 ಟನ್ ತೂಕವಿದ್ದರೆ, ಇನ್ನೊಂದು ಶಿಲೆ 14 ಟನ್‌ಗಳಷ್ಟು ತೂಗುತ್ತದೆ. ಇದನ್ನು ವಿಶ್ವ ಹಿಂದೂ ಪರಿಷತ್‌ನ ರಾಷ್ಟ್ರೀಯ ಕಾರ್ಯದರ್ಶಿ ರಾಜೇಂದ್ರ ಸಿಂಗ್ ಅವರ ನೇತೃತ್ವದಲ್ಲಿ ನೇಪಾಳದ ಮುಸ್ತಾಂಗ್ ಜಿಲ್ಲೆಯಿಂದ ಅಯೋಧ್ಯೆಗೆ ತರಿಸಲಾಗಿದೆ. ಜೊತೆಗೆ ಶಿಲೆಗಳನ್ನು ತರಿಸಲು 2 ವಿಭಿನ್ನ ಟ್ರಕ್‌ಗಳನ್ನು ಬಳಸಲಾಗಿದೆ.

ಶ್ರೀರಾಮ ಹಾಗೂ ಸೀತಾ ಮಾತೆಯ ವಿಗ್ರಗಳನ್ನು ಕೆತ್ತಲಾಗುವ ಈ ವಿಶೇಷ ಶಿಲೆಗಳು ನೇಪಾಳದ ಮುಸ್ತಾಂಗ್ ಜಿಲ್ಲೆಯ ಸಾಲಿಗ್ರಾಮ ಅಥವಾ ಮುಕ್ತಿನಾಥ (ಮೋಕ್ಷದ ಸ್ಥಳ) ಸಮೀಪವಿರುವ ಸ್ಥಳದಲ್ಲಿ ಗಂಡಕಿ ನದಿ ಬಳಿ ದೊರಕಿವೆ. ಈ ಶಿಲೆಗಳಿಂದ ಶ್ರೀರಾಮನ ಮಗುವಿನ ರೂಪದ ವಿಗ್ರಹವನ್ನು ಕೆತ್ತಲು ತೀರ್ಮಾನಿಸಲಾಗಿದೆ. ಈ ವಿಗ್ರಹವನ್ನು ರಾಮಮಂದಿರದ ಗರ್ಭಗುಡಿಯಲ್ಲಿ ಇರಿಸಲಾಗುತ್ತದೆ. ಮುಂದಿನ ವರ್ಷ ಜನವರಿಯಲ್ಲಿ ಮಕರ ಸಂಕ್ರಾಂತಿಯ ಸಂದರ್ಭ ಮೂರ್ತಿ ಸಿದ್ಧವಾಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ನೇಪಾಳದಲ್ಲಿ ಕಾಳಿ ಗಂಡಕಿ ಎಂಬ ಜಲಪಾತವಿದೆ. ಅದು ದಾಮೋದರ ಕುಂಡದಲ್ಲಿ ಹುಟ್ಟಿ, ಗಣೇಶ್ವರ್ ಧಾಮ ಗಂಡಕಿಯ ಉತ್ತರ ಭಾಗಕ್ಕೆ ಸುಮಾರು 85 ಕಿಮೀ ಹರಿಯುತ್ತದೆ. ಈ ಎರಡೂ ಬಂಡೆಗಳನ್ನು ಅಲ್ಲಿಂದ ತರಿಸಲಾಗಿದೆ. ಆ ಸ್ಥಳವು ಸಮುದ್ರ ಮಟ್ಟಕ್ಕಿಂತ 6,000 ಮಟ್ಟ ಎತ್ತರದಲ್ಲಿದೆ. ಅದು ಕೋಟ್ಯಂತರ ವರ್ಷಗಳಷ್ಟು ಹಳೆಯದು ಎಂದು ಜನರು ಹೇಳುತ್ತಾರೆ’ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ. ಈ ವಿಶೇಷ ಶಿಲೆಗಳನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಹಸ್ತಾಂತರಿಸುವುದಕ್ಕೂ ಮುನ್ನ ರಾಮನ ಜನ್ಮಸ್ಥಳದಲ್ಲಿ ಅರ್ಚಕರು ಹಾಗೂ ಸ್ಥಳೀಯರು ಹೂಮಾಲೆಗಳಿಂದ ಅಲಂಕರಿಸಿ, ಪೂಜೆ ಸಲ್ಲಿಸಿ ಅತೀ ಗೌರವಾಧಾರಗಳೊಂದಿಗೆ ಸ್ವಾಗತಿಸಿದ್ದಾರೆ.

You may also like

Leave a Comment