Ganesh festival lucky coupan: ಗಣೇಶೋತ್ಸವ ಪ್ರಯುಕ್ತ ಲಕ್ಕಿ ಕೂಪನ್ ಮೂಲಕ ಬಿಯರ್ ಸಹಿತ ಮದ್ಯದ ಬಹುಮಾನವಿರಿಸಿದ ಖಂಡನೆ, ಆಕ್ರೋಶಕ್ಕೆ ಕಾರಣವಾದ ವ್ಯಕ್ತಿಯನ್ನು ಕೊನೆಗೂ ಪೊಲೀಸರು ಪತ್ತೆ ಹಚ್ಚಿದ್ದು, ಠಾಣೆಗೆ ಕರೆಸಿ ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ ಘಟನೆಯು ಜಿಲ್ಲೆಯ ಗಡಿಭಾಗದ ಸುಳ್ಯದಲ್ಲಿ ನಡೆದಿದೆ.
ಗಣೇಶೋತ್ಸವ ಪ್ರಯುಕ್ತ ಸುಳ್ಯದ ಹಳೇಗೇಟು ಬಳಿಯಲ್ಲಿ ವ್ಯಕ್ತಿಯೋರ್ವ ಲಕ್ಕಿ ಡ್ರಾ ಕೂಪನ್ (Ganesh festival lucky coupan)ಮಾರಾಟ ಮಾಡಿದ್ದು, ಡ್ರಾ ಬಹುಮಾನವಾಗಿ ಬ್ಲ್ಯಾಕ್ ಆಂಡ್ ವೈಟ್ ಸಹಿತ ಒಂದು ಕೇಸ್ ಬಿಯರ್ ಇರಿಸಿ ಸ್ಥಳೀಯ ಯುವಕರನ್ನು ಟಾರ್ಗೆಟ್ ಮಾಡಿ ಮಾರಾಟ ಮಾಡಿದ್ದ ಎನ್ನಲಾಗಿದೆ.
ಈ ವಿಚಾರ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗವಾಗಿದ್ದು ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಬಳಿಕ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು,ಲಕ್ಕಿ ಕೂಪನ್ ಮಹಾಷಯನನ್ನು ಪತ್ತೆ ಹಚ್ಚುವ ಕೆಲಸ ಪೊಲೀಸರ ಹೆಗಲೇರಿತ್ತು.ವಿಚಾರ ಇನ್ನಷ್ಟು ವೈರಲ್ ಆಗುತ್ತಿದ್ದಂತೆ ಎಲ್ಲೆಡೆಯಿಂದಲೂ ಆಕ್ರೋಶ, ಖಂಡನೆ ವ್ಯಕ್ತವಾಗತೊಡಗಿತ್ತು.
ಕೊನೆಗೂ ಕೂಪನ್ ಇರಿಸಿದ ವ್ಯಕ್ತಿಯನ್ನು ಪೊಲೀಸರು ಲಾಕ್ ಮಾಡಿದ್ದು, ಶುಭ ಸಂದರ್ಭದಲ್ಲಿ ಕಿತಾಪತಿ ಮಾಡಿದ ವ್ಯಕ್ತಿಯ ಠಾಣೆಗೆ ಕರೆಸಿ ಬಿಸಿ ಬಿಸಿ ಕಜ್ಜಾಯ ನೀಡಿದ್ದಲ್ಲದೇ, ಎಚ್ಚರಿಕೆ ನೀಡಿ ಮುಚ್ಚಳಿಕೆ ಬರೆಸಿಕೊಂಡು ಬಿಡುವ ಮೂಲಕ ಆಕ್ರೋಶ, ಖಂಡನೆಗೆ ಅಂತ್ಯ ಹಾಡಿದ್ದಾರೆ.
