Karavara: ಭಾರವಾದ ಶಾಲಾ ಬ್ಯಾಗ್ ಹೊತ್ತುಕೊಂಡು ಶಾಲೆಗೆ ಹೋದ ಪರಿಣಾಮ 6ನೇ ತರಗತಿ ವಿದ್ಯಾರ್ಥಿಯೊಬ್ಬನ ಬಲಗೈ ಮುರಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಬೆಳಕಿಗೆ ಬಂದಿದೆ.
ಕಾರವಾರದ ಖಾಸಗಿ ಶಾಲೆಯಲ್ಲಿ ಶಾಲಾ ಮಕ್ಕಳ ಬ್ಯಾಗ್ ಹೊರೆ ಕಡಿಮೆ ಮಾಡುವ ನಿಯಮಗಳ ಪಾಲನೆಯಾಗದಿರುವ ಘಟನೆಯೊಂದು ಬೆಳಕಿಗೆ ಬಂದಿದ್ದು, 6ನೇ ತರಗತಿ ವಿದ್ಯಾರ್ಥಿಯೊಬ್ಬ ಅತಿಯಾದ ಭಾರದ ಶಾಲಾ ಬ್ಯಾಗ್ ಹೊತ್ತ ಪರಿಣಾಮ ಕೈ ಊದಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಕಾರವಾರದ ಸಮರ್ಥ ನಾಯ್ಕ ಎಂಬ ವಿದ್ಯಾರ್ಥಿಯೇ ಬಾರವಾದ ಬ್ಯಾಗ್ ಹೊತ್ತುಕೈ ಮುರಿದುಕೊಂಡ ವಿದ್ಯಾರ್ಥಿ
ಶಾಲೆಗೆ ಹೋಗಿದ್ದ ವಿದ್ಯಾರ್ಥಿ, ಶಿಕ್ಷಕರು ಹೆಚ್ಚು ಪುಸ್ತಕ ತರಲು ಹೇಳಿದ್ದರಿಂದ ಸುಮಾರು ಹೆಚ್ಚು ಭಾರದ ಪುಸ್ತಕಗಳನ್ನು ತುಂಬಿಕೊಂಡು ಭಾರವಾದ ಬ್ಯಾಗ್ ಹೊತ್ತು ಶಾಲೆಗೆ ತೆರಳಿದ್ದನು. ಶಾಲೆಯಿಂದ ಮರಳಿ ಮನೆಗೆ ಬಂದಾಗ ವಿದ್ಯಾರ್ಥಿಯ ಬಲಗೈ ಭುಜ ಭಾಗದಲ್ಲಿ ತೀವ್ರ ಊತ ಕಂಡುಬಂದಿದೆ. ತಕ್ಷಣ ಆತಂಕಗೊಂಡ ಪೋಷಕರು ವಿದ್ಯಾರ್ಥಿಯನ್ನು ಕಾರವಾರದ ಕ್ರಿಮ್ಸ್ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದ್ದಾರೆ. ವೈದ್ಯಕೀಯ ಪರೀಕ್ಷೆಯ ವೇಳೆ ವಿದ್ಯಾರ್ಥಿಯ ಬಲಗೈ ಮುರಿದಿರುವುದು ದೃಢಪಟ್ಟಿದೆ.
ಬಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಪೋಷಕರು ತೀವ್ರ ಆತಂಕಗೊಂಡಿದ್ದು, ಶಾಲಾ ಆಡಳಿತ ಮಂಡಳಿ ವಿರುದ್ಧ ಆಕ್ರೋಶಗೊಂಡಿದ್ದಾರೆ. ಮಾಹಿತಿ ತಿಳಿದ ಶಿಕ್ಷಣ ಇಲಾಖೆಯ ಜಂಟಿ ಆಯುಕ್ತ ಈಶ್ವರ ಉಳಾಗಡ್ಡಿ ಮಕ್ಕಳು ಆಯಾ ದಿನದ ವೇಳಾಪಟ್ಟಿಗೆ ಸೀಮಿತವಾಗಿರುವ ಪುಸ್ತಕಗಳನ್ನು ಮಾತ್ರ ತರಬೇಕು. ಅಗತ್ಯಕ್ಕಿಂತ ಹೆಚ್ಚಿನ ಪುಸ್ತಕ ಹೊತ್ತು ತರದಂತೆ ನೋಡಿಕೊಳ್ಳಲು ಶಾಲಾ ಆಡಳಿತ ಮಂಡಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
