Tamilnadu: ತಮಿಳುನಾಡಿನ (tamilnadu) ಚೆಂಗಲ್ಪಟ್ಟು ಜಿಲ್ಲೆಯ ಮರಿಮಲೈ ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಹೌದು, ಯುವಕನೊಬ್ಬ ಸ್ನೇಹಿತನ ಹೆಂಡತಿಯ ಜೊತೆ ರಹಸ್ಯ ಸಂಬಂಧ ಹೊಂದಿದ್ದು, ಕೊನೆಗೆ ತನ್ನ ಪ್ರೇಯಸಿಯನ್ನು ಆಕೆಯ ಮಗಳ ಮುಂದೆಯೇ ಬರ್ಬರವಾಗಿ ಹತ್ಯೆ (Murder) ಮಾಡಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿರುವ ಘಟನೆ ನಡೆದಿದೆ.
ಸುಡಾನ್ (30) ಎಂಬಾತನೇ ಆರೋಪಿ. ಮೃತ ಮಹಿಳೆ ಧರಣಿ (21). ಈಕೆ ಮರಿಮಲೈ ನಗರದ ರಾಜೀವ್ಗಾಂಧಿ ನಗರದ ನಿವಾಸಿ ಹಾಗೂ ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ಸುಂದರ್ ಎಂಬಾತನ ಪತ್ನಿ. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಸುಂದರ್ ಸ್ನೇಹಿತ ಸುಡಾನ್ ಆಗಾಗ ಇವರ ಮನೆಗೆ ಬರುತ್ತಿದ್ದ. ಇಬ್ಬರು ಜತೆಯಲ್ಲೇ ಕುಳಿತು ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಈ ವೇಳೆಯೇ ಸುಡಾನ್ ಮತ್ತು ಧರಣಿ ನಡುವೆ ಸ್ನೇಹ ಬೆಳೆದಿತ್ತು. ನಂತರ ಈ ಸ್ನೇಹ ಪ್ರೀತಿ, ಅಕ್ರಮ ಸಂಬಂಧಕ್ಕೆ ತಿರುಗಿತು.
ಇಬ್ಬರು ಸುಂದರ್ಗೆ ಗೊತ್ತಾಗದಂತೆ ರಹಸ್ಯ ಸಂಬಂಧವನ್ನು ಇಟ್ಟುಕೊಂಡಿದ್ದರು. ಆದರೆ, ಸತ್ಯ ಬೂದಿ ಮುಚ್ಚಿದ ಕೆಂಡದಂತೆ ಎನ್ನುವ ಹಾಗೆ ಕೆಲವು ತಿಂಗಳುಗಳ ನಂತರ ಸುಂದರ್ಗೆ ಈ ವಿಚಾರ ಗೊತ್ತಾಗಿ ಹೋಯಿತು. ಹಾಗೂ ಇಬ್ಬರಿಗೂ ಎಚ್ಚರಿಕೆ ನೀಡಿದ್ದ. ಬಳಿಕ ಧರಣಿ ಸುಡಾನ್ ಜತೆ ಮಾತನಾಡುವುದನ್ನು ನಿಲ್ಲಿಸಿದಳು.
ಸುಡಾನ್ ಜೊತೆ ಮಾತು ನಿಲ್ಲಿಸಿದಾಕೆ ಬೇರೊಬ್ಬನ ಹಿಂದೆ ಬಿದ್ದಿದ್ದಳು.
ಧರಣಿಗೆ ಬೇರೊಬ್ಬ ವ್ಯಕ್ತಿಯ ಜತೆ ಸಂಬಂಧ ಇರುವುದು ಸುಡಾನ್ಗೆ ತಿಳಿಯಿತು. ಈತ ಸಿಟ್ಟುಗೊಂಡು ಧರಣಿಯನ್ನು ಭೇಟಿಯಾಗಿ ಪ್ರಶ್ನೆ ಮಾಡಿದನು. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆಯಿತು.
ಕೋಪದಿಂದ ಸುಡಾನ್ ಮರುದಿನ ಬೆಳಗ್ಗೆ ಆಕೆಯನ್ನು ಕೊಂದಿದ್ದಾನೆ.
ಹೌದು, ಮಂಗಳವಾರ ಸುಂದರ್, ತನ್ನ ಕೆಲಸಕ್ಕೆ ತೆರಳಿದಾಗ, ಆತನ ಮನೆಗೆ ತೆರಳಿದ ಸುಡಾನ್, ಎರಡು ವರ್ಷದ ಮಗಳ ಎದುರಲ್ಲೇ ಧರಣಿಗೆ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದಿದ್ದಾನೆ. ಆಕೆ ಮೃತಪಟ್ಟಿರುವುದು (death) ಖಚಿತವಾದ ಬಳಿಕ ಚಾಕು ಸಮೇತ ಪೊಲೀಸ್ ಠಾಣೆಗೆ ತೆರಳಿ ಸುಡಾನ್ ಶರಣಾಗಿದ್ದಾನೆ. ಬಳಿಕ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಧರಣಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.
