ರಾಜ್ಯ ಸರ್ಕಾರವು ಗ್ರಾಮ ಪಂಚಾಯಿತಿ ನೌಕರರಿಗೆ ಬಿಗ್ ಶಾಕಿಂಗ್ ನ್ಯೂಸ್ ನೀಡಿದೆ. ಗ್ರಾಮಪಂಚಾಯಿತಿ ನೌಕರರನ್ನು ಸರ್ಕಾರಿ ನೌಕರರಾಗಿ ಪರಿಗಣಿಸಲಾಗುವುದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ವಿಧಾನಪರಿಷತ್ ನಲ್ಲಿ ಈ ಬಗ್ಗೆ ಮಾತನಾಡಿರುವ ಸಚಿವರು, ಗ್ರಾಮಪಂಚಾಯಿತಿ ಸಿಬ್ಬಂದಿಗಳು ಸರ್ಕಾರಿ ನೌಕರರಾಗುವುದಿಲ್ಲ. ಸದರಿ ನೌಕರರು ಸ್ಥಳೀಯ ಪ್ರಾಧಿಕಾರವಾದ ಗ್ರಾಮ ಪಂಚಾಯಿತಿಯ ನೌಕರರಾಗಿರುವ ಇವರನ್ನು ಸಿ ಮತ್ತು ಡಿ ದರ್ಜೆ ನೌಕರರೆಂದು ಪರಿಗಣಿಸಿ, ಸರ್ಕಾರಿ ನೌಕರರಂತೆ ವೇತನ ಶ್ರೇಣಿಯನ್ನು ಆಡಳಿತಾತ್ಮಕವಾಗಿ ನಿಗದಿಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮದ ಪ್ರಕಾರ, ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದ ಮಾದರಿ, ನೇಮಕಾತಿ ವಿಧಾನ ಮತ್ತು ವೇತನ ಶ್ರೇಣಿಯನ್ನು ನಿಗದಿಪಡಿಸಿದೆ. ಅದರಂತೆ ಮಂಜೂರಾದ ಹುದ್ದೆಗಳಿಗೆ ನಿಯಮದಂತೆ ಜಿಲ್ಲಾ ಪಂಚಾಯಿತಿ ಮುಖ್ಯ ನಿರ್ವಹಣಾಧಿಕಾರಿ ಅನುಮತಿ ಪಡೆದು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಪಂಚಾಯಿತಿ ಸಿಬ್ಬಂದಿ ಸೇವೆಯಲ್ಲಿ ಇರುವಾಗಲೇ ಮೃತಪಟ್ಟರೆ ಅನುಕಂಪದ ಆಧಾರದ ಮೇಲೆ ಅವರ ಅವಲಂಬಿತರನ್ನು ನೇಮಕ ಮಾಡಿಕೊಳ್ಳಲು ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಿಗೂ ನಿರ್ದೇಶನ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
