Indian Railway : ದೇಶದಲ್ಲಿ ದಿನೇ ದಿನೇ ರೈಲು ಅಪಘಾತಗಳು ಹೆಚ್ಚುತ್ತಿರುವ ಬೆನ್ನೆಲು ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಇನ್ನು ಮುಂದೆ ಈ ರೈಲು ಅಪಘಾತಗಳಿಗೆ ಬ್ರೇಕ್ ಹಾಕಲು ನಿರ್ಧರಿಸಿದೆ. ಇದಕ್ಕಾಗಿ ಬರೋಬ್ಬರಿ 1.3ಲಕ್ಷ ಕೋಟಿ ರೂಪಾಯಿ ವೆಚ್ಚದಲ್ಲಿ ಮೆಗಾ ಪ್ಲಾನ್ ಅನ್ನು ಸಿದ್ಧಪಡಿಸಿದೆ.
ಹೌದು, ಮೂಲಗಳ ಪ್ರಕಾರ, 2027ರ ಹಣಕಾಸು ವರ್ಷದಲ್ಲಿ ರೈಲ್ವೆಯ ಒಟ್ಟು ಬಂಡವಾಳ ವೆಚ್ಚದ ಸುಮಾರು ಅರ್ಧದಷ್ಟು ಭಾಗವನ್ನು ಕೇವಲ ಸುರಕ್ಷತಾ ಕಾಮಗಾರಿಗಳಿಗಾಗಿ ಬಳಸಲಾಗುವುದು ಎಂದು ಸರ್ಕಾರ ತಿಳಿಸಿದೆ. ಇದರಲ್ಲಿ ಒಂದು ಭಾಗ ನಿರ್ವಹಣೆ ಮತ್ತು ಭಾರತದ ಸ್ವದೇಶಿ ತಂತ್ರಜ್ಞಾನವಾದ ‘ಕವಚ್’ (Kavach) ವ್ಯವಸ್ಥೆಯ ವಿಸ್ತರಣೆಗೆ ಈ ಹಣ ಬಳಕೆಯಾಗಲಿದೆ.
ಏನಿದು ಕವಚ್? ಇದು ಹೇಗೆ ಕಾರ್ಯವೆಸಗುತ್ತದೆ?
23 ಮಾರ್ಚ್ 2022 ರಂದು, ರೈಲ್ವೇ ಸಚಿವಾಲಯವು ಕವಚ್ ಎಂಬ ಸ್ಥಳೀಯ ಸ್ವಯಂಚಾಲಿತ ರೈಲು ರಕ್ಷಣೆ (ATP) ವ್ಯವಸ್ಥೆಯ ಅಭಿವೃದ್ಧಿಯೊಂದಿಗೆ ಭಾರತದಲ್ಲಿ ರೈಲು ಕಾರ್ಯಾಚರಣೆಗಳ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಘೋಷಿಸಿತು. ಕವಚ್ ಭಾರತೀಯ ರೈಲ್ವೇಗಳಿಗೆ ರಾಷ್ಟ್ರೀಯ ATP ವ್ಯವಸ್ಥೆಯಾಗಿ ಅಳವಡಿಸಲಾಗಿದೆ.
ಕವಚ್ ಅನ್ನು ಲೋಕೋಮೋಟಿವ್ ಪೈಲಟ್‌ಗಳಿಗೆ ಅಪಾಯದ ಸಮಯದಲ್ಲಿ ಸಿಗ್ನಲ್ ಪಾಸಿಂಗ್ (Signal Passing At Danger- SPAD) ಮತ್ತು ಅತಿ ವೇಗವನ್ನು ತಪ್ಪಿಸುವಲ್ಲಿ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ಇದು ದಟ್ಟವಾದ ಮಂಜಿನಂತಹ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ರೈಲು ಕಾರ್ಯಾಚರಣೆಗಳಿಗೆ ಬೆಂಬಲವನ್ನು ನೀಡುತ್ತದೆ. ಅಗತ್ಯವಿದ್ದಾಗ ಸ್ವಯಂಚಾಲಿತವಾಗಿ ಬ್ರೇಕ್‌ಗಳನ್ನು ಅನ್ವಯಿಸುವ ಮೂಲಕ, ಸಿಸ್ಟಮ್ ರೈಲಿನ ವೇಗದ ಮೇಲೆ ಉತ್ತಮ ನಿಯಂತ್ರಣವನ್ನು ಖಚಿತಪಡಿಸುತ್ತದೆ ಮತ್ತು ಸಂಭಾವ್ಯ ಅಪಘಾತಗಳನ್ನು ತಡೆಯುತ್ತದೆ.
ಪ್ರಸ್ತುತ ಕೇವಲ ಶೇ. 2ರಷ್ಟು ಹಳಿಗಳಲ್ಲಿ ಈ ವ್ಯವಸ್ಥೆಯಿದ್ದು, ಮುಂದಿನ ದಿನಗಳಲ್ಲಿ ದೇಶದಾದ್ಯಂತ 67,000 ಕಿಲೋಮೀಟರ್ ಹಳಿಗಳಿಗೂ ಇದನ್ನು ವಿಸ್ತರಿಸಲು ಸರ್ಕಾರ ಗುರಿ ಹಾಕಿಕೊಂಡಿದೆ. ಇದಕ್ಕಾಗಿ ಸರ್ಕಾರ 1.3 ಲಕ್ಷ ರೂಪಾಯಿಗಳನ್ನು ಕಾಯ್ದಿರಿಸಿದೆ.
