ಅತಿ ಆಸೆನೋ ಆಸೆ ಪಟ್ಟಿದ್ದಕ್ಕೋ ಏನೋ ಮಹಿಳೆಯೋರ್ವಳು ಇಲ್ಲಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಹೌದು, ಇನ್ನೇನು ಹುಳಿ ಕೈಗೆ ಸಿಕ್ಕೇಬಿಟ್ಟಿತು ಎನ್ನುವಷ್ಟರಲ್ಲಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ ಓರ್ವ ಮಹಿಳೆ. ಈ ದುರಂತ ಘಟನೆಯು ವಿಜಯಪುರ ಜಿಲ್ಲೆಯಲ್ಲಿ ಸಂಭವಿಸಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಢವಳಗಿಯಲ್ಲಿ ಈ ಘಟನೆ ನಡೆದಿದೆ.
ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕು ಗೆದ್ದಲಮರಿ ಗ್ರಾಮದ ಪರಮವ್ವ ಮಲ್ಲಪ್ಪ ಕುರಿ (24) ಸಾವಿಗೀಡಾದ ಮಹಿಳೆ.
ಈಕೆ ಢವಳಗಿ ಭಾಗದ ಹೊಲಗಳಲ್ಲಿ ಕಬ್ಬು ಕಟಾವು ಮಾಡಲು ಬಂದಿದ್ದವರ ಪೈಕಿ ಒಬ್ಬಳಾಗಿದ್ದಳು. ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಉರುವಲು ಕಟ್ಟಿಗೆ ಮುಂತಾದ ಸಾಮಗ್ರಿ ತುಂಬಿದ್ದರಿಂದ ಹುಣಸೆ ಮರವೊಂದರಲ್ಲಿನ ಹಣ್ಣು ಕೈಗೆ ಸಿಗುವಂತಿತ್ತು. ಹೀಗಾಗಿ ಈಕೆ ಅಲ್ಲಿ ಕೂತೇ ಹಣ್ಣು ಕೀಳಲು ಹೋಗಿದ್ದಾಳೆ.
ಕೈಗೆಟುಕುತ್ತಿದ್ದ ಟೊಂಗೆಯನ್ನು ಹಿಡಿದೆಳೆದು ಇನ್ನೇನು ಹುಣಸೆಹಣ್ಣನ್ನು ಕೀಳಬೇಕು ಎನ್ನುವಷ್ಟರಲ್ಲಿ ಟ್ರ್ಯಾಕ್ಟರ್ ಮುಂದಕ್ಕೆ ಚಲಿಸಿದೆ. ಆಗ ಆಯತಪ್ಪಿದ್ದಿಂದ ಈಕೆ ಕೆಳಕ್ಕೆ ಬಿದ್ದಿದ್ದಾಳೆ. ನಂತರ ಟ್ರ್ಯಾಲಿಯ ಚಕ್ರದ ಕೆಳಕ್ಕೆ ಸಿಕ್ಕಿದ್ದರಿಂದ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಕ್ಷಣ ಮಾತ್ರದಲ್ಲಿ ನಡೆದ ಈ ಘಟನೆ ನಿಜಕ್ಕೂ ಬೆಚ್ಚಿಬೀಳಿಸುವಂತೆ ಇದೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
