Lina Mukherjee: ಬಾಲಿಗೆ ಪ್ರವಾಸಕ್ಕೆ ತೆರಳಿದ್ದ ಟಿಕ್ ಟಾಕ್ ಸ್ಟಾರ್ ಲೀನಾ ಮುಖರ್ಜಿ ಇಸ್ಲಾಮಿಕ್ ಪ್ರಾರ್ಥನೆ (Islamic Prayer) ಬಳಿಕ ಹಂದಿ ಮಾಂಸ ತಿಂದ ಹಿನ್ನೆಲೆ ಇಂಡೋನೇಷ್ಯಾ ನ್ಯಾಯಾಲಯವು (Indonesia Court) 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.

ಇಸ್ಲಾಮಿಕ್ ರಾಷ್ಟ್ರವಾಗಿರುವ ಇಂಡೋನೇಷ್ಯಾದಲ್ಲಿ ಧರ್ಮನಿಂದನೆಯ ಕಾನೂನುಗಳು ಬಲಿಷ್ಠವಾಗಿವೆ. ಟಿಕ್ ಟಾಕ್ ಸ್ಟಾರ್ ಲೀನಾ ಮುಖರ್ಜಿ (Lina Mukherjee) ಬಾಲಿಗೆ ಪ್ರವಾಸಕ್ಕೆ ತೆರಳಿದ್ದ ಸಂದರ್ಭ ಬಿಸ್ಮಿಲ್ಲಾ ಪ್ರಾರ್ಥನೆ ಮುಗಿಸಿದ ನಂತರ ಹಂದಿ ಮಾಂಸ ತಿಂದ ವೀಡಿಯೋವನ್ನು ಟಿಕ್ಟಾಕ್ ಖಾತೆಯಲ್ಲಿ ಹಂಚಿಕೊಂಡಿದ್ದಳು. ಕಳೆದ ಮಾರ್ಚ್ನಲ್ಲಿ ಬಿಸ್ಮಿಲ್ಲಾ ಪ್ರಾರ್ಥನೆ ಬಳಿಕ ಹಂದಿ ಮಾಂಸ ತಿಂದ ವೀಡಿಯೋ ವೈರಲ್ ಆಗುತ್ತಿದ್ದಂತೆ ಇಸ್ಲಾಂನಲ್ಲಿ ಹಂದಿ ಮಾಂಸವು ನಿಷಿದ್ಧವಾಗಿರುವ ಹಿನ್ನೆಲೆ ಜನರು ಲೀನಾ ಮುಖರ್ಜಿ ವಿರುದ್ದ ಆಕ್ರೋಶ ಹೊರ ಹಾಕಿದ್ದರು. ಇದಾದ 6 ತಿಂಗಳ ಬಳಿಕ ಆಕೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ.
ಧಾರ್ಮಿಕ ಆಚಾರ-ವಿಚಾರಗಳನ್ನು ನಂಬಿರುವ ಒಂದು ನಿಗದಿತ ಸಮುದಾಯದ ಜನರ ವಿರುದ್ಧ ದ್ವೇಷ ಹರಡಿಸುವ ಉದ್ದೇಶದಿಂದ ಮಾಡಿದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರಿಂದ ಲೀನಾ ಮುಖರ್ಜಿ ಅವರಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಪಾಲೆಮ್ಬಾಂಗ್ ನ್ಯಾಯಾಲಯವು ತಿಳಿಸಿದೆ.ಹೀಗಾಗಿ, ಲೀನಾ ಮುಖರ್ಜಿಗೆ( 33) 2 ವರ್ಷ ಜೈಲು (Jail) ಶಿಕ್ಷೆ ವಿಧಿಸಲಾಗಿದ್ದು, ಇದರ ಜೊತೆಗೆ 16,245 ಡಾಲರ್ (13.47 ಲಕ್ಷ ರೂ.) ದಂಡ ವಿಧಿಸಲಾಗಿದೆ. ನಿಗದಿತ ಅವಧಿಯಲ್ಲಿ ದಂಡ ಪಾವತಿಸದೆ ಹೋದರೆ ಇನ್ನೂ 3 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸುವುದಾಗಿ ಕೋರ್ಟ್ ಸೂಚಿಸಿದೆ.
ಇದನ್ನೂ ಓದಿ: ವಾಹನ ಸವಾರರಿಗೆ ಮತ್ತೊಂದು ಶಾಕ್ ! ಬರಲಿದೆ ಹೊಸ ತೆರಿಗೆ ನಿಯಮ!!!
