ಟಿಪ್ಪು ಸುಲ್ತಾನ್ ಆಳ್ವಿಕೆ ಅವಧಿಯಲ್ಲಿ ಟಿಪ್ಪು ಆದೇಶದ ಮೇರೆಗೆ ದೀವಟಿಗೆ ಸಲಾಂ ಆರಂಭವಾಗಿತ್ತು. ಅಂದಿನಿಂದ-ಇಂದಿನವರೆಗೂ ಈ ಪೂಜೆಯನ್ನು ಅನೇಕ ದೇಗುಲಗಳಲ್ಲಿ ಮಾಡಲಾಗ್ತಿತ್ತು. ಆದರೆ ಇನ್ನು ಮುಂದೆ ದೀವಟಿಗೆ ಸಲಾಂಗೆ ಅವಕಾಶ ಇಲ್ಲ.
ಹೌದು, ಟಿಪ್ಪು ಆಡಳಿತದಲ್ಲಿ ಮಾಡುತ್ತಿದ್ದ ಪೂಜೆಗೆ ಈಗ ಬ್ರೇಕ್ ಬಿದ್ದಿದೆ. ಟಿಪ್ಪುವಿನ ಕಾಲದ ದೀವಟಿಗೆ ಸಲಾಂಗೆ ರಾಜ್ಯ ಧಾರ್ಮಿಕ ಪರಿಷತ್ ನಿಷೇಧಿಸಿದೆ.
ಈ ಮೊದಲೇ ಟಿಪ್ಪು ರಾಜ್ಯಾಡಳಿತ ಮಾಡುತ್ತಿದ್ದ ಕಾಲದಿಂದ ಈ ಪೂಜೆ ಆರಂಭಗೊಂಡಿತ್ತು. ರಾಜ್ಯದ ಎಲ್ಲಾ ಪ್ರಸಿದ್ಧ ದೇವಾಲಯಗಳಲ್ಲಿ ದೀವಟಿಗೆ ಸಲಾಂ ಪೂಜೆ ನಡೆಯುತ್ತಿತ್ತು. ದೇವಸ್ಥಾನದ ಸಂಧ್ಯಾ ಪೂಜೆಯಲ್ಲಿ ಈ ಪೂಜೆಯನ್ನು ಮಾಡಲಾಗಿತ್ತು. ಟಿಪ್ಪು ತನ್ನ ಆಡಳಿತದ ಕಾಲದಲ್ಲಿ ಬಲತ್ಕಾರವಾಗಿ ದೇವಸ್ಥಾನಗಳಲ್ಲಿ “ದೀವಟಿಗೆ ಸಲಾಂ” ಪೂಜೆ ಆರಂಭಿಸಿದ್ದನಂತೆ. ಇದೀಗ ದೇವಾಲಯಗಳಲ್ಲಿ ದೀವಟಿಗೆ ಪೂಜೆಗೆ ನಡೆಸದಂತೆ ಸೂಚಿಸಲಾಗಿದೆ.
ಮುಖ್ಯವಾಗಿ ಮಂಡ್ಯ ಶ್ರೀ ಚೆಲುವ ನಾರಾಯಣಸ್ವಾಮಿ ದೇವಾಲಯದಲ್ಲಿ ಪ್ರಾಚೀನ ಕಾಲದಿಂದಲೂ ಸಂಧ್ಯಾ ಕಾಲದಲ್ಲಿ ಮೂಲ ದೇವರಿಗೆ ಆರತಿ ಮಾಡಲಾಗುತ್ತಿತ್ತು. ಇದನ್ನು ಟಿಪ್ಪು ಸುಲ್ತಾನ್ ಆಳ್ವಿಕೆ ಅವಧಿಯಲ್ಲಿ ಟಿಪ್ಪು ಆದೇಶದ ಮೇರೆಗೆ ‘ದೀವಟಿಗೆ ಸಲಾಂ’ ಎಂದು ಹೆಸರು ಬದಲಿಸಲಾಗಿತ್ತು ಎನ್ನಲಾಗಿದೆ.
ಆದರೆ ದೀವಟಿಗೆ ಪೂಜೆಯನ್ನು ರಾಜ್ಯವನ್ನಾಳುವ ರಾಜನ ಪರವಾಗಿ ಮಾಡಲಾಗುತ್ತಿತ್ತು. ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು, ಪುತ್ತೂರು ಮಹಾಲಿಂಗೇಶ್ವರ ಮೊದಲಾದ ದೇವಸ್ಥಾನಗಳಲ್ಲಿ ಇಂದಿಗೂ ನಡೆದುಕೊಂಡು ಬಂದ ಪೂಜೆಯಾಗಿದೆ. ಇನ್ನು ಮುಂದೆ ಈ ದೀವಟಿಗೆ ಸಲಾಂ ಪೂಜೆ ನಡೆಸದಂತೆ ಧಾರ್ಮಿಕ ಪರಿಷತ್ ನಿಂದ ಸುತ್ತೋಲೆ ಹೊರಡಿಸಿದೆ. ಹಾಗಾಗಿ ದೀವಟಿಗೆ ಸಲಾಂ ಬದಲು ಸಂಧ್ಯಾಕಾಲದಲ್ಲಿ ‘ ದೀಪ ನಮಸ್ಕಾರ’ ಪೂಜೆ ನೆರವೇರಿಸಲು ಸೂಚಿಸಲಾಗಿದೆ.
ಇನ್ನು ಮುಂದೆ ರಾಜ್ಯವನ್ನಾಳುವ ರಾಜ, ಮಂತ್ರಿ ಮತ್ತು ಪ್ರಜೆಗಳ ಒಳಿತಿಗಾಗಿ ಈ ‘ದೀಪ ನಮಸ್ಕಾರ ಪೂಜೆ’ ನಡೆಯಲಿದೆ. ರಾಜ್ಯ ಧಾರ್ಮಿಕ ಪರಿಷತ್ ಮುಜರಾಯಿ ಇಲಾಖೆ ದೀವಟಿಗೆ ಸಲಾಂ ಹೆಸರನ್ನೂ ಬದಲಾವಣೆ ಮಾಡಿದ್ದಾರೆ.
