ನವದೆಹಲಿ: ನಿನ್ನೆ (ಡಿಸೆಂಬರ್ 8) ಭಾರತದ ಪಾಲಿಗೆ ಅತ್ಯಂತ ಕಡು ಕರಾಳ ದಿನ. ಸೇನಾ ಹೆಲಿಕಾಪ್ಟರ್ ಪತನದಲ್ಲಿ ಭಾರತೀಯ ಸೇನಾಪಡೆಯ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ. ಬಿಪಿನ್ ರಾವತ್ ಈ ಅನಿರೀಕ್ಷಿತ ನಿಧನದಿಂದ ಇಡೀ ದೇಶವೇ ಶೋಕ ಸಾಗರದಲ್ಲಿ ಮುಳುಗಿರುವಾಗ ಭಾರತೀಯ ಸೇನೆಯ ನಿವೃತ್ತ ಕರ್ನಲ್ ಒಬ್ಬರು ಮಾಡಿರುವ ಟ್ವೀಟ್ ತೀವ್ರ ಟೀಕೆಗೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ನಿನ್ನೆ ಸೇನಾ ಹೆಲಿಕಾಪ್ಟರ್ ಪತನವಾದ ಬೆನ್ನಲ್ಲೇ ಇಡೀ ದೇಶವೇ ಒಗ್ಗಟ್ಟು ಪ್ರದರ್ಶಿಸಿ ಸೇನಾ ಮುಖ್ಯಸ್ಥರು ಹಾಗೂ ಅವರ ಸಿಬ್ಬಂದಿಯ ಚೇತರಿಕೆಗಾಗಿ ಪಾರ್ಥನೆ ಸಲ್ಲಿಸುತ್ತಿದ್ದರು.
ಆದರೆ ಅತ್ತ ನಿವೃತ್ತ ಕರ್ನಲ್ ಬಲ್ಜಿತ್ ಬಕ್ಷಿ, ಹೆಲಿಕಾಪ್ಟರ್ ಪತನವನ್ನು “ಕರ್ಮವೂ ಜನರೊಂದಿಗೆ ವ್ಯವಹರಿಸಲು ತನ್ನದೇ ಆದ ಮಾರ್ಗವನ್ನು ಹೊಂದಿದೆ” ಎಂದಿದ್ದಾರೆ. ಆ ಮೂಲಕ ಈ ನಿವೃತ್ತ ಕರ್ನಲ್ ಬಲ್ಜಿತ್ ಬಕ್ಷಿ ಅವರು ಟ್ವೀಟ್ ಮಾಡುವ ಮೂಲಕ ತಮ್ಮ ಸಣ್ಣತನವನ್ನು ಪ್ರದರ್ಶಿಸಿ ದೇಶದ ಗೌರವಕ್ಕೆ ಧಕ್ಕೆ ತಂದಿದ್ದಾರೆ.
ಟ್ವೀಟ್ನಲ್ಲಿ ಅವರು ಯಾರ ಹೆಸರನ್ನೂ ಉಲ್ಲೇಖಿಸಿಲ್ಲದಿದ್ದರೂ, ಅವರು ಟ್ವೀಟ್ ಮಾಡಿದ್ದ ಸಮಯ ಸಂದರ್ಭ ಅದರ ಹಿಂದಿನ ಉದ್ದೇಶವನ್ನು ಎತ್ತಿ ಹೇಳುತ್ತಿತ್ತು. ಯಾವಾಗ ಟ್ವೀಟ್ ಎಲ್ಲಡೆ ವೈರಲ್ ಆಗಿ ಸಾಕಷ್ಟು ಟೀಕೆಗಳು ಹರಿದುಬರಲು ಆರಂಭಿಸಿತೋ ತಕ್ಷಣ ಟ್ವೀಟ್ ಅನ್ನು ಬಕ್ಷಿ ಅವರು ಡಿಲೀಟ್ ಮಾಡಿದ್ದಾರೆ. ಆದರೂ, ಟ್ವೀಟ್ನ ಸ್ಕ್ರೀನ್ಶಾಟ್ ಎಲ್ಲೆಡೆ ವೈರಲ್ ಆಗುತ್ತಿದ್ದು, ಅದಕ್ಕೆ ಟೀಕೆಗಳು ಸಾಮಾನ್ಯ ಆಗಿದೆ.
ವೆಲ್ಲಿಂಗ್ಟನ್‌ನ ಮಿಲಿಟರಿ ಶಾಲೆಯಲ್ಲಿ ನಿಗದಿಯಾಗಿದ್ದ ಸೆಮಿನಾರ್ಗೆಂದು ಸಿಡಿಎಸ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್.ಎಸ್.ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದರ್ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್, ಲ್ಯಾನ್ಸ್ ನಾಯಕ್ ಬಿ ಸಾಯ್ತೇಜ್, ಹವಲ್ದಾರ್ ಸತ್ಪಾಲ್ ಸೇರಿದಂತೆ 14 ಮಂದಿ ಬುಧವಾರ ರಷ್ಯಾ ನಿರ್ಮಿತ ಸೇನಾ ಹೆಲಿಕಾಪ್ಟರ್ Mi-17V5 ನಲ್ಲಿ ಹೋಗುತ್ತಿದ್ದರು. ಮಾರ್ಗಮಧ್ಯೆ ಹೆಲಿಕಾಪ್ಟರ್ ಪತನಗೊಂಡು ಬಿಪಿನ್ ರಾವತ್ ದಂಪತಿ ಸೇರಿ 13 ಮಂದಿ ಮೃತಪಟ್ಟಿದ್ದಾರೆ. ಸಿಡಿಎಸ್ ಬಿಪಿನ್ ರಾವತ್ ನಿಧನಕ್ಕೇ ಇಡೀ ದೇಶವೇ ಕಂಬನಿ ಮಿಡಿದಿದೆ.
