Sowjanya Case banner: ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ಉಜಿರೆಯ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ನ್ಯಾಯಕ್ಕಾಗಿ ಆಗ್ರಹಿಸಿ ಅಕ್ಟೋಬರ್ 08 ರಂದು ಸುಳ್ಯ ತಾಲೂಕಿನ ಐವರ್ನಾಡಿನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನಾ ಸಭೆಯ ಸಲುವಾಗಿ ಸುಳ್ಯದ ಜ್ಯೋತಿ ವೃತ್ತದ ಬಳಿಯಲ್ಲಿ ಹೋರಾಟಗಾರರು ಹಾಕಿದ್ದ ಬ್ಯಾನರ್( Sowjanya Case banner) ನ್ನು ಇಂದು ಬೆಳ್ಳಂಬೆಳಗ್ಗೆ ಅಧಿಕಾರಿಗಳ ಸಮ್ಮುಖದಲ್ಲಿ ತೆರವುಗೊಳಿಸಿದ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಮತ್ತೆ ಅದೇ ಜಾಗದಲ್ಲಿ ಅಳವಡಿಸಲಾಗಿದೆ.

ಕಳೆದ ಸೆಪ್ಟೆಂಬರ್ 26-27 ರ ನಡುವೆ ಹೋರಾಟಗಾರರ ಸಮಿತಿಯು ನಗರ ಪಂಚಾಯತ್ ನಿಂದ ಅನುಮತಿ ಪಡೆದು ಅಳವಡಿಸಿತ್ತು. ಆದರೆ ಇಂದು ಸುಳ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನಜಾಗೃತಿ ಸಮಿತಿ ವತಿಯಿಂದ ಜನಜಾಗೃತಿ ಜಾಥಾ, ಗಾಂಧಿ ಸ್ಮೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಾರ್ಯಕ್ರಮಕ್ಕೆ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಭಾಗವಹಿಸುವ ಹಿನ್ನೆಲೆಯಲ್ಲಿ ಪೊಲೀಸರ ಸಲಹೆಯಂತೆ ಅಧಿಕಾರಿಗಳ ವರ್ಗ ಬೆಳ್ಳಂಬೆಳಗ್ಗೆ ಅನುಮತಿ ಪಡೆದ ಬ್ಯಾನರ್ ಗಳನ್ನು ತೆರವುಗೊಳಿಸಿದ್ದರು.
ಈ ಬಗ್ಗೆ ಸುದ್ದಿ ಹಬ್ಬುತ್ತಿದ್ದಂತೆ ಸೌಜನ್ಯ ಪರ ಹೋರಾಟ ಸಮಿತಿಯ ಜಿಲ್ಲಾ ಮಟ್ಟದ ನಾಯಕರು ಗರಂ ಆಗಿದ್ದರು. ಅಧಿಕಾರಿಗಳಿಗೆ ಫೋನ್ ಮೇಲೆ ಫೋನ್ ಹೋಗಿದೆ. ಮಂಗಳೂರಿನಲ್ಲಿ ಎಸ್ಪಿಯವರಿಗೆ ದೂರು ನೀಡಲು ತಂಡವೊಂದು ಕಾರ್ಯೋನ್ಮುಖವಾಗಿದೆ. ಜನ, ಮಾಧ್ಯಮ ಕೂಡಾ ಫೋನಾಯಿಸಿ ವಿಚಾರಿಸಿದ್ದರು. ನಗರ ಪಂಚಾಯತ್ ಗೆ ಶುಲ್ಕ ಕಟ್ಟಿ ಅನುಮತಿ ಪಡೆದಿದ್ದರೂ ಬ್ಯಾನರ್ ತೆರವು ಮಾಡಿದ ಅಧಿಕಾರಿಗಳ ನಡೆಗೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಬಳಿಕ ಹೋರಾಟ ಸಮಿತಿಯ ಪ್ರಮುಖರು ಅಧಿಕಾರಿಗಳಲ್ಲಿ ಈ ಬಗ್ಗೆ ಪ್ರಶ್ನಿಸಿದ ಬಳಿಕ ಅಧಿಕಾರಿಗಳು ಪ್ರತಿಭಟನೆಯ ಕಾವಿಗೆ ಕರಗಿ ಕಂಗಾಲಾಗಿದ್ದರು. ನಾಳೆ ಫ್ಲೆಕ್ಸ್ ಅಳವಡಿಸಿಕೊಡುವುದಾಗಿ ಹೇಳಿದ್ದರು ಎನ್ನಲಾಗಿದೆ. ಇದಕ್ಕೆ ಒಪ್ಪದ ಹೋರಾಟಗಾರರು ತಾವೇ ಫ್ಲೆಕ್ಸ್ ಪಡೆದುಕೊಂಡು ಬಂದು ಅದೇ ಜಾಗದಲ್ಲಿ ಮತ್ತೆ ಅಳವಡಿಸಿದ್ದಾರೆ. ಸದ್ಯ ಇಂದಿನ ಅಧಿಕಾರಿಗಳ ನಡೆಗೆ ಖಂಡನೆ ವ್ಯಕ್ತವಾಗಿದ್ದು, ಅನುಮತಿ ಪಡೆದಿದ್ದರೂ ತೆರವುಗೊಳಿಸಿದ ಕಾರಣ ಮಾತ್ರ ಇನ್ನೂ ಬಹಿರಂಗವಾಗಿಲ್ಲ. ಬ್ಯಾನರ್ ವಿಷಯದಲ್ಲೂ ಕಾಣದ ಕೈಗಳು ಕೈಯಾಡಿಸಿದ ಸ್ಪಷ್ಟ ಸುದ್ದಿ ಬಂದಿದೆ.
ಇದನ್ನೂ ಓದಿ: Yogi adityanath: ‘ಸನಾತನ’ ಅನ್ನೋದು ಮಾತ್ರ ಧರ್ಮ, ಉಳಿದವೆಲ್ಲಾ….. !! ಅಚ್ಚರಿಯ ಹೇಳಿಕೆ ನೀಡಿದ ಯೋಗಿ ಆದಿತ್ಯನಾಥ್
