New Vehicle Registration: ರಾಜ್ಯದಲ್ಲಿ ವಾಹನಗಳ ನೋಂದಣಿಯನ್ನು ಹೆಚ್ಚು ದುಬಾರಿಯನ್ನಾಗಿ ಮಾಡುವ ಹೊಸ ಕಾನೂನಿಗೆ ಕರ್ನಾಟಕ ಸರ್ಕಾರ ಹಸಿರು ನಿಶಾನೆ ತೋರಿದೆ. ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಮಾರ್ಚ್ 6ರಂದು ಕರ್ನಾಟಕ ಮೋಟಾರು ವಾಹನ ತೆರಿಗೆ ತಿದ್ದುಪಡಿ ಕಾಯ್ದೆ 2024ಕ್ಕೆ ಅನುಮೋದನೆ ನೀಡಿದ್ದಾರೆ.
ಟ್ಯಾಕ್ಸಿಗಳು, ಬಸ್ಸುಗಳು ಮತ್ತು ಆಟೋ ರಿಕ್ಷಾಗಳಂತಹ ಹೊಸದಾಗಿ ನೋಂದಾಯಿಸಲಾದ ಸಾರಿಗೆ ವಾಹನಗಳಿಗೆ (ಹಳದಿ ಬೋರ್ಡ್ ವಾಣಿಜ್ಯ ವಾಹನಗಳು) ಮಾತ್ರ ಶೇಕಡಾ 3ರಷ್ಟು ಹೆಚ್ಚುವರಿ ಸೆಸ್ ಅನ್ವಯಿಸುತ್ತದೆ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಹೊಸ ಕಾನೂನಿನಡಿಯಲ್ಲಿ, ಸಾರಿಗೆ ವಾಹನಗಳಿಗೆ ಶೇಕಡಾ 3 ರಷ್ಟು ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತದೆ. ಈ ಹಣವು ಕರ್ನಾಟಕ ಮೋಟಾರು ಸಾರಿಗೆ ಮತ್ತು ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ನಿಧಿಗೆ ಹೋಗುತ್ತದೆ ಎಂದು ಗೆಜೆಟ್ ನೋಟಿಫಿಕೇಶನ್ ನಲ್ಲಿ ತಿಳಿಸಿದೆ.
ಹೆಚ್ಚುವರಿಯಾಗಿ, ಸರ್ಕಾರವು ಈಗ ವಿದ್ಯುತ್ ವಾಹನಗಳ (ಇವಿ) ಮೇಲೆ ಜೀವಮಾನ ತೆರಿಗೆಯನ್ನು ವಿಧಿಸುವ ಅಧಿಕಾರವನ್ನು ಹೊಂದಿದೆ. ಎಲೆಕ್ಟ್ರಿಕ್ ಕಾರು, ಜೀಪ್, ಓಮ್ನಿಬಸ್ ಅಥವಾ ಖಾಸಗಿ ಸೇವಾ ವಾಹನದ ಬೆಲೆ 25 ಲಕ್ಷಕ್ಕಿಂತ ಹೆಚ್ಚಿದ್ದರೆ, ನೋಂದಣಿ ಸಮಯದಲ್ಲಿ ಅದರ ವೆಚ್ಚದ ಮೇಲೆ ಶೇಕಡಾ 10ರಷ್ಟು ತೆರಿಗೆಯನ್ನು ವಿಧಿಸಲಾಗುತ್ತದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವಿದ್ಯುತ್ ಚಾಲಿತ ವಾಹನಗಳ ಮೇಲೆ ಈ ರೀತಿಯ ತೆರಿಗೆಯನ್ನು ವಿಧಿಸಲಾಗುತ್ತಿದೆ.
