Chandigarh : ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಠಾಣೆಯ ಅಧಿಕಾರಿಗಳ ವಿರುದ್ಧವೇ ತಿರುಗಿಬಿದ್ದ ಪೊಲೀಸ್ ಪೇದೆಯೊಬ್ಬ ನಡುರಸ್ತೆಯಲ್ಲೇ ಪ್ರತಿಭಟನೆ ನಡೆಸಿ ಹೆದ್ದಾರಿಯಲ್ಲಿ ಮಲಗಿ ಹೈಡ್ರಾಮ ಮಾಡಿದ ಘಟನೆ ಪಂಜಾಬಿನ (Chandigarh) ಜಲಂಧರ್ನ ಭೋಗಪುರ ಏರಿಯಾದಲ್ಲಿರುವ ಪಠಾಣ್ಕೋಟ್ ಹೆದ್ದಾರಿಯಲ್ಲಿ ನಡೆದಿದೆ. ಸದ್ಯ ಈ ಹೈಡ್ರಾಮದ ವಿಡಿಯೋ ವೈರಲ್ ಆಗಿದೆ.
ಪೇದೆ, ಕಳ್ಳನೊಬ್ಬನನ್ನು ಬಂಧಿಸಿ ತಾನು ಕರ್ತವ್ಯ ನಿರ್ವಹಿಸುವ ಭೋಗಪುರ ಪೊಲೀಸ್ ಠಾಣೆಗೆ ಕರೆದೊಯ್ದು ಜೈಲಿನಲ್ಲಿ ಇರಿಸಿದ್ದ. ಆದರೆ, ಮಾರನೇ ದಿನ ಪೊಲೀಸ್ ಠಾಣೆಗೆ ಹೋದಾಗ ಜೈಲಿನಲ್ಲಿ ಕಳ್ಳ ಇರಲಿಲ್ಲ. ಸಹೋದ್ಯೋಗಿಗಳನ್ನು ಪ್ರಶ್ನೆ ಮಾಡಿದಾಗ ಯಾರೂ ಸರಿಯಾಗಿ ಉತ್ತರ ನೀಡದಿದ್ದಾಗ ಸಿಟ್ಟು, ಅಸಮಾಧಾನಗೊಂಡ ಪೇದೆ ಪ್ರತಿಭಟನೆ ನಡೆಸಿದ್ದಾರೆ.
ಹೆದ್ದಾರಿಗೆ ತೆರಳಿ, ರಸ್ತೆಗೆ ಅಡ್ಡಲಾಗಿ ಹಗ್ಗವನ್ನು ಕಟ್ಟಿ ವಾಹನಗಳನ್ನು ಬ್ಲಾಕ್ ಮಾಡಲು ಪ್ರಯತ್ನಿಸಿದ್ದಾರೆ. ಇದನ್ನು ಕಂಡ ಸಹೋದ್ಯೋಗಿಯೊಬ್ಬರು ಹಗ್ಗವನ್ನು ಕಿತ್ತೆಗೆದರು. ನಂತರ ಪೇದೆ
ರಸ್ತೆಯಲ್ಲಿ ಬಸ್ ಮುಂದೆ ಅಡ್ಡಲಾಗಿ ಮಲಗಿ ಪ್ರತಿಭಟಿಸಲು ಸಜ್ಜಾದರು. ಈ ವೇಳೆ ಸಹೋದ್ಯೋಗಿ ಹಾಗೂ ಪೇದೆಗೆ ವಾಗ್ವಾದ ನಡೆದಿದೆ.
ಕಳ್ಳರನ್ನು ಹಿಡಿದದ್ದು ನಾನು ಆದರೆ, ಠಾಣೆಯ ಸಿಬ್ಬಂದಿಗಳು ಹಣ ಪಡೆದು ಖದೀಮರನ್ನು ಬಿಟ್ಟು ಕಳುಹಿಸಿದ್ದಾರೆ. ಪ್ರತಿಭಟನೆ ನಡೆಸುತ್ತೇನೆ ಎಂದು ಬಸ್ ಮುಂದೆ ಅಡ್ಡಲಾಗಿ ಮಲಗಿರುವ ಪೊಲೀಸ್ ಪೇದೆ ಹೇಳುತ್ತಿದ್ದಾರೆ. ಇತ್ತ ಮಲಗಿ ಬ್ಲಾಕ್ ಮಾಡಿರುವ ರಸ್ತೆಯಿಂದ ಎದ್ದು ಬರುವಂತೆ ಸಹೋದ್ಯೋಗಿಯೊಬ್ಬರು ಪೇದೆಗೆ ಒತ್ತಾಯಿಸುತ್ತಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಬಗ್ಗೆ ಭೋಗ್‌ಪುರ ಠಾಣೆಯ ಪ್ರಭಾರಿ ಸುಖ್‌ಜಿತ್ ಸಿಂಗ್ ಮಾತನಾಡಿದ್ದು, ಜಗಳಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಪೇದೆ ಠಾಣೆಗೆ ಕರೆತಂದಿದ್ದರು. ಆದರೆ, ಆ ವ್ಯಕ್ತಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ನಂತರವೇ ಆತನನ್ನು ಬಿಡುಗಡೆ ಮಾಡಲಾಗಿದೆ. ಹಾಗೂ ಪೇದೆ ಮಾಡಿರುವ ಆರೋಪ ಸುಳ್ಳು ಎಂದು ಹೇಳಿದ್ದಾರೆ
