Mumbai: ನಾಲ್ಕನೇ ಮಹಡಿಯಿಂದ ಬಿದ್ದ ಮಗು ಭೂಮಿಗೆ ಬೀಳದೆ ಅದೃಷ್ಟವಶಾತ್ ಮಡಿಲಿಗೆ ಬಂದು ಬಿದ್ದಂತಹ ಆಶ್ಚರ್ಯಕರ ಘಟನೆ ಮುಂಬೈನ (Mumbai) ವಿರಾರ್ ಎಂಬಲ್ಲಿ ನಡೆದಿದೆ. ಈ ಮೂಲಕ ಮಗು ಸಾವಿನ ಕದ ತಟ್ಟಿ ಪಾರಾಗಿ ಬಂದಿದೆ.
ದುರಸ್ತಿ ಕಾರ್ಯ ನಡೆಯುತ್ತಿದ್ದ ಜೀವದಾನಿ ದರ್ಶನ್ ಎಂಬ ಕಟ್ಟಡದಿಂದ ದೇವಶಿ ಸಹಾನಿ ಎಂಬ ಬಾಲಕಿ ಕೆಳಗೆ ಬಿದ್ದಿದ್ದಾಳೆ. ಹೌದು, ಸಹಾನಿ ರಾತ್ರಿ 9 ಗಂಟೆಗೆ ಅದೇ ಅಪಾರ್ಟ್’ಮೆಂಟ್ ನಲ್ಲಿದ್ದ ತನ್ನ ಮನೆಯಿಂದ ಹೊರಗೆ ಬಂದಿದ್ದಾಳೆ. ಕಟ್ಟಡದ ದುರಸ್ತಿ ಕಾರ್ಯಕ್ಕಾಗಿ ಲೋಹದ ರೇಲಿಂಗ್ ತೆಗೆದು ಹಸಿರು ಹೊದಿಕೆಯನ್ನು ಹಾಕಲಾಗಿತ್ತು. ಈ ದಾರಿಯಾಗಿ ಬಂದ ಬಾಲಕಿ ಹೊದಿಕೆಯ ಅಂತರದ ಮೂಲಕ ಜಾರಿ ಕೆಳಗೆ ಬಿದ್ದಿದ್ದಾಳೆ.
ನಾಲ್ಕನೇ ಮಹಡಿಯಿಂದ ನೇರವಾಗಿ ಹೊರಗೆ ಕುಳಿತಿದ್ದ ಶಿವಕುಮಾರ್ ಜೈಸ್ವಾಲ್ ಎಂಬ ವ್ಯಕ್ತಿಯ ಮಡಿಲಿಗೆ ದೊಪ್ಪನೆ ಬಿದ್ದಿದ್ದಾಳೆ. ವ್ಯಕ್ತಿಗೆ ಒಂದು ಕ್ಷಣ ಭಯ, ಆಶ್ಚರ್ಯ ಎಲ್ಲವೂ ಒಟ್ಟಿಗೆ ಅನುಭವವಾಗಿದೆ. ತನ್ನ ಮಡಿಲಿಗೆ ಮಗು ಬಂದು ಬಿದ್ದಿದೆ ಎಂದು ತಿಳಿದು ಆತ ತಕ್ಷಣವೇ ಮಗುವಿನ ಪೋಷಕರಿಗೆ ತಿಳಿಸಿ, ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಬಾಲಕಿಗೆ ಬಿದ್ದು ರಭಸಕ್ಕೆ ಹಣೆಗೆ ಪೆಟ್ಟಾಗಿದ್ದು, ಹಣೆಯ ಮೇಲೆ ಎಂಟು ಹೊಲಿಗೆಗಳನ್ನು ಹಾಕಲಾಗಿದೆ. ಜೊತೆಗೆ ಬಾಲಕಿಯನ್ನು ರಕ್ಷಿಸಿದ ಶಿವಕುಮಾರ್’ಗೂ ಕೊಂಚ ಗಾಯವಾಗಿದ್ದು, ಬಾಲಕಿ ಮೇಲಿಂದ ಬಿದ್ದಿದ್ದರಿಂದ ಆತನ ತೊಡೆಗೆ ಸಣ್ಣ ಮಟ್ಟದಲ್ಲಿ ಗಾಯವಾಗಿದೆ. ಸದ್ಯ ಬಿಲ್ಡರ್ ಮತ್ತು ಗುತ್ತಿಗೆದಾರನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: RBI Recruitment 2023: ಆರ್’ಬಿಐನಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ, ಡೀಟೇಲ್ಸ್ ಗಮನಿಸಿ !
