Burhanpur : ಜನಪದ ಪಂಚಾಯತ್ ಅಧ್ಯಕ್ಷೆ ಪೂಜಾ ದಾದು (30 ವ.) ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಬುರ್ಹಾನ್‌ಪುರ (Burhanpur) ಜಿಲ್ಲೆಯಲ್ಲಿ ನಡೆದಿದೆ.
ಈಕೆ ತನ್ನ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ (hospital) ಸಾಗಿಸಲಾಯಿತು. ಆದರೆ, ಅದಾಗಲೇ ಸಮಯ ಮೀರಿತ್ತು. ವೈದ್ಯರು ಆಕೆ ಸಾವನ್ನಪ್ಪಿದ್ದಾರೆ (death) ಎಂದು ತಿಳಿಸಿದರು.
ಇದೀಗ ಪೊಲೀಸರು ಪೂಜಾ ಸಾವಿನ ಕುರಿತು ತನಿಖೆ ನಡೆಸುತ್ತಿದ್ದಾರೆ. ಹಿರಿಯ ಅಧಿಕಾರಿ ದೇವೇಂದ್ರ ಪಾಟಿದಾರ್ ಅವರು, ಪ್ರಾಥಮಿಕ ತನಿಖೆಯಿಂದ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ತಿಳಿದು ಬಂದಿದೆ ಎಂದಿದ್ದಾರೆ. ಆದರೆ, ಆತ್ಮಹತ್ಯೆಗೆ ಕಾರಣ ಏನೆಂದು ತಿಳಿದುಬಂದಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮನೋಜ್ ಲಾಧ್ವೆ ಹೇಳಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಆಕೆಯ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.
ಪೂಜಾ ಭಾರತೀಯ ಜನತಾ ಪಕ್ಷದ ಮಾಜಿ ಶಾಸಕ (ನೇಪಾನಗರ) ದಿವಂಗತ ರಾಜೇಂದ್ರ ದಾದು ಅವರ ಮಗಳು. ಬಿಜೆಪಿ (bjp) ಬೆಂಬಲದೊಂದಿಗೆ ಜನಪದ ಪಂಚಾಯತ್ ಅಧ್ಯಕ್ಷೆಯಾಗಿದ್ದರು. ಪೂಜಾ ದಾದು ಅವರ ಹಿರಿಯ ಸಹೋದರಿ ಮಂಜು ದಾದು ಪ್ರಸ್ತುತ ಮಧ್ಯಪ್ರದೇಶ ಮಂಡಿ ಮಂಡಳಿಯ ಉಪಾಧ್ಯಕ್ಷರಾಗಿದ್ದಾರೆ.
